ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಶ್ಲಾಘಿಸಿದರು.
ಸಿದ್ಧಾರ್ಥನಗರ: ಚುನಾವಣಾ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದ ‘ಪೂರ್ವಾಂಚಲ’ದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಸೋಮವಾರ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಒಂಭತ್ತು ವೈದ್ಯಕೀಯ ಕಾಲೇಜುಗಳನ್ನು ಸಿದ್ಧಾರ್ಥನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು. ಉಳಿದ ಎಂಟು ಕಾಲೇಜುಗಳು ಇಟಾಹ್, ಹರ್ದೋಯಿ, ಪ್ರತಾಪಗಢ, ಫತೇಫುರ್, ದೇವರಿಯಾ, ಗಾಜಿಪುರ್, ಮಿರ್ಜಾಪುರ್, ಜೌನ್‌ಪುರ್‌ದಲ್ಲಿ ಸ್ಥಾಪಿತವಾಗಿವೆ.
ನಂತರ ಮಾತನಾಡಿದ ಅವರು, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದಿಂದ ಇದು ಸಾಧ್ಯವಾಗಿತ್ತು. ಇದರಿಂದ ಕಳೆದ ನಾಲ್ಕು ವರ್ಷದಲ್ಲಿ ಮೆಡಿಕಲ್ ಸೀಟುಗಳ ಸಂಖ್ಯೆ 1900 ಏರಿದೆ ಎಂದರು.
ರಾಜ್ಯದಲ್ಲಿ ಹಿಂದೆ ಒಂಭತ್ತು ವೈದ್ಯಕೀಯ ಕಾಲೇಜುಗಳು ಒಟ್ಟಿಗೆ ಉದ್ಘಾಟನೆಯಾದ ಉದಾಹರಣೆ ಇಲ್ಲ. ರಾಜಕೀಯ ಆದ್ಯತೆಗಳ ಬಗ್ಗೆ ಸ್ಪಷ್ಟ ಕಲ್ಪನೆ ಇರುವ ಸರ್ಕಾರ ಅಧಿಕಾರಲ್ಲಿದಾಗ ಮಾತ್ರ ಇಂಥ ಅಭಿವೃದ್ಧಿ ಕಾರ್ಯ ಸಾಧ್ಯ. ಆದರೆ ಹಿಂದಿನ ಸರ್ಕಾರಗಳು ತಮ್ಮ ಕುಟುಂಬದ ಪೋಷಣೆಗೆ ಆದ್ಯತೆ ನೀಡಿದ್ದವು. ಸಾರ್ವಜನಿಕ ಹಣದಿಂದ ಅಸ್ತಿಪಾಸ್ತಿ ಮಾಡಿಕೊಂಡವು. ಆದರೆ, ಬಿಜೆಪಿ ಸರ್ಕಾರದ ಆದ್ಯತೆ ಇದಲ್ಲ. ಸಾರ್ವಜನಿಕ ಹಣವನ್ನು ಉಳಿಸಿ ಬಡವರಿಗೆ ಕಲ್ಯಾಣ ಆಗುವಂತಹ ಯೋಜನೆ ಮಾಡುವುದು ಎಂದು ಹೇಳಿದರು.
ಈ ಕಾಲೇಜುಗಳು ಆರಂಭವಾಗಿರುವುದರಿಂದ 2,500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ಸೇವೆ ಜನರಿಗೆ ದೊರಕಿದಂತಾಗಿದೆ. ಐದು ಸಾವಿರ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಈ ಹಿಂದೆ ಪೂರ್ವಾಂಚಲವೆಂದರೆ ರೋಗ-ರುಜಿನಗಳ ಬೀಡಾಗಿತ್ತು. ಆದರೀಗ ಇದು ಉತ್ತರ ಭಾರತದ ಮೆಡಿಕಲ್ ಹಬ್ ಆಗಿದೆ. ಇವುಗಳಿಂದ ಈಗಿನ ಮತ್ತು ಭವಿಷ್ಯದ ತಲೆಮಾರುಗಳಿಗೆ ಅನುಕೂಲ ಆಗಲಿದೆ ಎಂದರು.
ದೇಶದಲ್ಲಿ ಹೊಸದಾಗಿ 157 ವೈದ್ಯಕೀಯ ಕಾಲೇಜುಗಳು ಸ್ಥಾಪನೆ ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಹೇಳಿದರು. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಭಾಗವಹಿಸಿದ್ದರು.
ವಾರಾಣಸಿಗೆ ಮೋದಿ ಭೇಟಿ
ಸಿದ್ಧಾರ್ಥನಗರದಿಂದ ತಮ್ಮ ಮತಕ್ಷೇತ್ರವಾದ ವಾರಾಣಸಿಗೆ ಪ್ರಯಾಣ ಬೆಳೆಸಿದ ಮೋದಿ, ಅಲ್ಲಿ 5,200 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲೇ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆ (ಬಿಎಂಎಎಸ್‌ಬಿಐ)ಯನ್ನು ಉದ್ಘಾಟಿಸಿಲಿದ್ದಾರೆ. ಇದು ದೇಶಾದ್ಯಂತ ವೈದ್ಯಕೀಯ ಮೂಲಸೌಕರ್ಯ ವೃದ್ಧಿಸುವ ಮಹತ್ತರ ಯೋಜನೆ ಆಗಿದೆ.
Discussion about this post