ಚಿಕ್ಕಮಗಳೂರು: ನಿಧನರಾದ ಹಿರಿಯ ನಟ, ವಿಚಾರವಾದಿ, ರಂಗಕರ್ಮಿ, ಬರಹಗಾರ, ನಿವೃತ್ತ ಪ್ರಾಧ್ಯಾಪಕ ಪ್ರೊ|| ಜಿ.ಕೆ.ಗೋವಿಂದರಾವ್ ಅವರಿಗೆ ವಿವಿಧ ಪಕ್ಷ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಶನಿವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ಅಂಬೇಡ್ಕರ್ ಭವನದಲ್ಲಿ ಶನಿವಾರ ಸಮಾವೇಶಗೊಂಡ ಮುಖಂಡರು ಬಹುಜನ ಸಮಾಜಪಕ್ಷ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ನೇತೃತ್ವದಲ್ಲಿ ವಿಚಾರವಾದಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಿದರು. ದತ್ತಪೀಠ ಹೋರಾಟದ ವೇಳೆ ಜಿಲ್ಲೆಗೆ ಆಗಮಿಸಿದ್ದ ಪ್ರೊ|| ಜಿ.ಕೆ.ಗೋವಿಂದರಾವ್ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.
ಈ ವೇಳೆ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸತ್ಯವನ್ನು ಹೇಳಲು ಸಾಮಾನ್ಯವಾಗಿ ಎಲ್ಲರೂ ಹೆದರುತ್ತಾರೆ, ಸುಮ್ಮನೆ ನಾವ್ಯಾಕೆ ವಿವಾದಕ್ಕೊಳಗಾಗುವುದು, ವಿರೋಧ ಕಟ್ಟಿಕೊಳ್ಳುವುದು ಎಂದು ಸುಮ್ಮನಿದ್ದುಬಿಡುತ್ತಾರೆ ಆದರೆ ಪ್ರೊ|| ಜಿ.ಕೆ.ಗೋವಿಂದರಾವ್ ಅವರು ಯಾರಿಗೂ, ಯಾವುದಕ್ಕೂ ಹೆದರದೆ ಸತ್ಯವನ್ನು ಹೇಳುತ್ತಿದ್ದರು ಎಂದರು.
ಜಿ.ಕೆ.ಗೋವಿಂದರಾವ್ ಅವರು ಅಪ್ಪಟ ದೇಶಪ್ರೇಮಿ, ರಾಜ್ಯದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಅವರು ಮೌಢ್ಯ ಮತ್ತು ಅನ್ಯಾಯದ ವಿರುದ್ದ ಸಮಾಜವನ್ನು ಆಗಾಗ ಬಡಿದೆಬ್ಬಿಸುತ್ತಿದ್ದರು. ರಾಜಿರಹಿತವಾಗಿ ಹೋರಾಟ ಮಾಡುತ್ತಿದ್ದ ಗೋವಿಂದರಾವ್ ಅವರ ಬದುಕು, ಬರಹ, ಚಿಂತನೆ, ವೈಚಾರಿಕತೆ ಇಂದಿನ ಪೀಳಿಗೆಗೆ ಅತ್ಯಗತ್ಯ ಎಂದು ಹೇಳಿದರು.
ರೈತ ಮುಖಂಡ ಗುರುಶಾಂತಪ್ಪ ಮಾತನಾಡಿ ನಾನು ಸಂಪ್ರದಾಯವಾದಿಗಳನ್ನು ವಿರೋಧಿಸುವುದಿಲ್ಲ ಆದರೆ ಅದರ ಹೆಸರಿನಲ್ಲಿ ಡಂಬಾಚಾರ ಮಾಡುವವರನ್ನು ವಿರೋಧಿಸುತ್ತೇನೆ ಎಂದು ಗೋವಿಂದರಾವ್ ಹೇಳುತ್ತಿದ್ದರು ಎಂದು ತಿಳಿಸಿದರು.
ಜನದನಿ ಸಂಘಟನೆಯ ಮುಖಂಡ ರವೀಶ್ ಕ್ಯಾತನಬೀಡು ಮಾತನಾಡಿ ಗೋವಿಂದರಾವ್ ಅವರು ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ತಲುಪಿಸಲು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸದಾ ಹೆಣಗುತ್ತಿದ್ದರು ಎಂದು ತಿಳಿಸಿದರು.
ಗೋವಿಂದರಾವ್ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಸಿಪಿಐ ಮುಖಂಡ ಬಿ.ಅಮ್ಜದ್ ನಗರದಲ್ಲಿ ನಡೆದ ಸೌಹಾರ್ದತಾ ಸಮಾವೇಶದಲ್ಲಿ ಗೋವಿಂದರಾವ್ ಅವರು ಪಾಲ್ಗೊಂಡು ಶಕ್ತಿಯ ಸಂಚಲನ ಮೂಡಿಸಿದ್ದರು ಎಂದು ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಮುಖಂಡ ಡಿ.ಎಂ.ಮಂಜುನಾಥಸ್ವಾಮಿ ಗೋವಿಂದರಾವ್ ಅವರ ಬದುಕು, ಬರಹ ಮತ್ತು ಹೋರಾಟಗಳನ್ನು ವಿವರಿಸಿದರು.
ಕನ್ನಡ ಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ, ಹುಣಸೇಮಕ್ಕಿ ಲಕ್ಷ್ಮಣ್, ನವಶಕ್ತಿ ಯುವವೇದಿಕೆ ಜಿಲ್ಲಾಧ್ಯಕ್ಷ ಸಿ.ಆರ್.ರಘು, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಪತ್ರಕರ್ತ ಎನ್.ರಾಜು, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಕೆ.ಎಸ್.ಮಂಜುಳಾ, ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅನಿತಾ ನುಡಿನಮನ ಸಲ್ಲಿಸಿದರು. ಎಐಟಿಯುಸಿ ಮುಖಂಡ ಕೆ.ಗುಣಶೇಖರ್, ಜೆ.ಡಿ.ಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ ಉಪಸ್ಥಿತರಿದ್ದರು.

























Discussion about this post