ಚಿಕ್ಕಮಗಳೂರು: ಸಂವೇದ ತರಗತಿಗಳು ಚಂದನ ವಾಹಿನಿಯಲ್ಲಿ ಉತ್ತಮವಾಗಿ ಮೂಡಿಬರುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಡೆದು ಕಲಿಕಾ ಖಾತ್ರಿಯ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ಅವರು ಇಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಚಿಕ್ಕಮಗಳೂರು ಮತ್ತು ಉಪನಿರ್ದೇಶಕರ ಕಛೇರಿ (ಆಡಳಿತ) ವತಿಯಿಂದ ಪರ್ಯಾಯ ಶೈಕ್ಷಣಿಕ ಯೋಜನೆ ಅನುಷ್ಠಾನಕ್ಕಾಗಿ ೩ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿದ್ದಪಡಿಸಿರುವ ಅಭ್ಯಾಸ ಹಾಳೆಗಳನ್ನು (ವರ್ಕ್ ಶೀಟ್‌ಗಳು) ಬಿಡುಗಡೆಗೊಳಿಸಿ ಮಾತನಾಡಿದರು.
೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್-೧೯ರ ಹಿನ್ನೆಲೆಯಲ್ಲಿ ಶಾಲಾ ತರಗತಿಗಳನ್ನು ಭೌತಿಕವಾಗಿ ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲ. ಕಳೆದ ವರ್ಷದ ಶೈಕ್ಷಣಿಕ ಹಿನ್ನಡೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನಲ್ಲಿ ಮಕ್ಕಳ ಕಲಿಕೆಗೆ ಮತ್ತು ಮೌಲ್ಯಾಂಕನ ವಿಶ್ಲೇಷಣೆಗೆ ಪರ್ಯಾಯ ಕಾರ್ಯತಂತ್ರ ರೂಪಿಸಿ, ಮಕ್ಕಳ ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಇಲಾಖಾ ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ನಗರ ಪ್ರದೇಶದ ಮಕ್ಕಳು ಆನ್ ಲೈನ್ ಸೌಲಭ್ಯ ಹೊಂದಿರುತ್ತಾರೆ. ಸರ್ಕಾರಿ ಶಾಲೆಗಳ ಮತ್ತು ಗ್ರಾಮೀಣ ಭಾಗದ ಬಹುತೇಕ ಮಕ್ಕಳಿಗೆ ಆನ್ ಲೈನ್ ಸೌಲಭ್ಯ ಇಲ್ಲದಿರುವುದರಿಂದ ಈ ಕೊರತೆಯನ್ನು ಈ ಅಭ್ಯಾಸ ಹಾಳೆಗಳನ್ನು ಬಳಕೆಯಿಂದ ನೀಗಿಸಬಹುದಾಗಿದೆ. ಇದು ಕಲಿಕಾಂಶ ಚಟುವಟಿಕೆಗಳು, ಪುನರ್ ಮನನ ಚಟುವಟಿಕೆಗಳು ಮತ್ತು ಮೌಲ್ಯಮಾಪನ ಹಾಳೆಗಳನ್ನು ಒಳಗೊಂಡಿದೆ. ಶಿಕ್ಷಕರು ಈ ಅಭ್ಯಾಸ ಹಾಳೆಗಳನ್ನು ಮನನ ಮಾಡಿಕೊಂಡು ತದನಂತರ ವಿದ್ಯಾರ್ಥಿಗಳ ಬಳಕೆಗೆ ನೀಡಬೇಕು ಎಂದು ತಿಳಿಸಿದರು.
ಪರ್ಯಾಯ ಶೈಕ್ಷಣಿಕ ವ್ಯವಸ್ಥೆ ಎಂದರೆ, ತರಗತಿ ಬೋಧನೆಗೆ ಪರ್ಯಾರ್ಯವಾಗಿ ಅಫ್‌ಲೈನ್ ಮತ್ತು ಅನ್ ಲೈನ್ ವಿಧಾನಗಳ ಮೂಲಕ ವಿವಿಧ ಕಾರ್ಯತಂತ್ರಗಳನ್ನು ಬಳಸಿ ನಿರಂತರ ಮಕ್ಕಳ ಕಲಿಕೆ ಮತ್ತು ಮೌಲ್ಯಾಂಕನ ವಿಶ್ಲೇಷಣೆ ಮಾಡುವುದು ಎಂದ ಅವರು ಅಭ್ಯಾಸ ಹಾಳೆಗಳನ್ನು ಎಲ್ಲಾ ಮಕ್ಕಳಿಗೆ ವಿವಿಧ ಮೂಲಗಳ ಮೂಲಕ ಶಾಲೆಗಳ ಮುಖ್ಯಸ್ಥರು ತಲುಪಿಸಿ ಅನುಪಾಲನೆ ಮಾಡಬೇಕು ಎಂದು ಹೇಳಿದರು.
ಶಿಕ್ಷಕರು ಶಾಲಾ ಅವಧಿಯಲ್ಲಿ ಶಾಲೆಯಲ್ಲಿದ್ದು, ಮಕ್ಕಳ ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ವಿವಿಧ ಶೈಕ್ಷಣಿಕ ಚಟುವಟಿಕೆ ಮತ್ತು ಅಭ್ಯಾಸ ಹಾಳೆಗಳನ್ನು ನೀಡಿ, ಮಕ್ಕಳಿಗೆ ನಿರಂತರ ಮೌಲ್ಯಮಾಪನ ಮಾಡಿ, ಅಗತ್ಯವಿದ್ದಲ್ಲಿ ಪುನರ್ ಮನನ ಮಾಡಿ, ವಿಷಯವಾರು ಕೃತಿ ಸಂಪುಟ ನಿರ್ವಹಿಸಬೇಕು ಎಂದು ಸೂಚಿಸಿದರು.
ಅಭ್ಯಾಸ ಹಾಳೆಗಳ ಪ್ರಯೋಜನವನ್ನು ೧೩೮೫ ಸರ್ಕಾರಿ, ೨೭ ಅನುದಾನಿತ, ೨೧೧ ಅನುದಾನ ರಹಿತ ಶಾಲೆಗಳ ಸುಮಾರು ೬೪೦೦ ಪ್ರಾಥಮಿಕ ಶಾಲಾ ಶಿಕ್ಷಕರು, ೧ ಲಕ್ಷ ೨ ಸಾವಿರ ವಿದ್ಯಾರ್ಥಿಗಳು ಶೈಕ್ಷಣಿಕ ಮಾರ್ಗದರ್ಶನಕ್ಕಾಗಿ ಬಳಸಿಕೊಳ್ಳುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ, ಚಿಕ್ಕಮಗಳೂರು ಡಯಟ್ (ಅಭಿವೃದ್ದಿ) ಪ್ರಾಂಶುಪಾಲರು ಮತ್ತು ಉಪನಿರ್ದೇಶಕಿ ಪುಪ್ಪಲತಾ, ಶಿಕ್ಷಣಾಧಿಕಾರಿ ಜಯಣ್ಣ, ಉಪಯೋಜನಾ ಸಮನ್ವಯಾಧಿಕಾರಿಗಳಾದ ಸಿದ್ದರಾಜಪ್ಪ, ಲೋಕೇಶ್ ಸೇರಿದಂತೆ ಕರ್ನಾಟಕ ಸಮಗ್ರ ಶಿಕ್ಷಣ ಡಯಟ್ ಉಪನ್ಯಾಸಕರು ಹಾಗೂ ವಿಷಯ ಪರಿವೀಕ್ಷಕರು ಹಾಜರಿದ್ದರು.

























Discussion about this post