ಕನ್ನಡನಾಡಿ ಸುದ್ಧಿ ಜಾಲ: ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಪಠ್ಯಕ್ರಮ ಸಂಪೂರ್ಣವಾಗಿ RSS ಆಗಿದೆಯೇ? ಎಂಬ ಅನುಮಾನ ಹುಟ್ಟಿದೆ. ವಿಡಿ ಸಾವರ್ಕರ್ ಮತ್ತು ಎಂ.ಎಸ್. ಗೋಲ್ವಾಲ್ಕರ್ ಅವರ ಕೃತಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದ್ದು, ಇದು ಕೇರಳದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೇರಳದ ಸಿಎಂ ಪಿಣರಾಯಿ ವಿಜಯನ್ ಪರಿಶೀಲನೆಗೆ ತಜ್ಞರ ಸಮಿತಿಯನ್ನು ನೇಮಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿಫಾರಸಿನಂತೆ ಈ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯೂ ವಿಶ್ವವಿದ್ಯಾಲಯದ ಇಬ್ಬರು ಸದಸ್ಯರನ್ನು ಒಳಗೊಂಡಂತಿದೆ. ಈ ತಜ್ಞರ ಸಮಿತಿಯು ಪಠ್ಯವನ್ನು ಪರಿಶೀಲನೆಗೆ ಒಳಪಡಿಸಲಿದೆ ಎನ್ನಲಾಗಿದೆ.
ವಿಶ್ವವಿದ್ಯಾನಿಯಲದ ಪಠ್ಯ ಕ್ರಮದಲ್ಲಿ RSS ನಾಯಕರ ಪುಸ್ತಕಗಳ ಸೇರ್ಪಡೆ ವಿವಾದಕ್ಕೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, “ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನು ತೋರಿಸಿದವರನ್ನು ವೈಭವೀಕರಿಸುವುದು ವಿವೇಕವಲ್ಲ. ಕೇರಳ ರಾಜ್ಯವು ಯಾವಾಗಲೂ ಇಂತಹ ವಿವಾದಾತ್ಮಕ ವ್ಯಕ್ತಿಗಳಿಂದ ಮತ್ತು ಅವರನ್ನು ವೈಭವೀಕರಿಸುವುದರ ಬಗ್ಗೆ ಅಂತರ ಕಾಯ್ದುಕೊಂಡು ಬಂದಿದೆ. ಯಾವುದೇ ಪ್ರತಿಗಾಮಿ ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಮಿತಿಯು ಪಠ್ಯಕ್ರಮವನ್ನು ಪರಿಶೀಲಿಸುತ್ತದೆ ಮತ್ತು ಸಮಿತಿಯ ಶಿಫಾರಸುಗಳ ಪ್ರಕಾರ ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ, ಕಣ್ಣೂರು ವಿಶ್ವವಿದ್ಯಾನಿಲಯವು ಸಾವರ್ಕರ್ ಅವರ ‘ಹಿಂದುತ್ವ: ಹಿಂದೂ ಯಾರು’, ಗೋಲ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’, ‘ವಿ ಓರ್ ಅವರ್ ನೇಷನ್ಹುಡ್ ಡಿಫೈನೆಡ್’ ಕೃತಿಯನ್ನು ಎಂಎ (ಕಲಾ ಸ್ನಾತಕೋತ್ತರ) ಆಡಳಿತ ಮತ್ತು ರಾಜಕೀಯದ ವಿಷಯದ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.
ದೀನದಯಾಳ್ ಉಪಾಧ್ಯಾಯರ ಸಮಗ್ರ ಮಾನವತಾವಾದ ಬಾಲರಾಜ್ ಮಧೋಕ್ ಅವರ ‘ಭಾರತೀಯೀಕರಣ: ಏನು, ಏಕೆ ಮತ್ತು ಹೇಗೆ?’ ಭಾಗಗಳು ಕೂಡ ಪಠ್ಯಕ್ರಮದಲ್ಲಿ ಒಳಗೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಗೋಪಿನಾಥ್ ರವೀಂದ್ರನ್ ಅವರು ಪಠ್ಯಕ್ರಮದಲ್ಲಿ ಕೇಸರೀಕರಣದ ಆರೋಪವನ್ನು ತಿರಸ್ಕರಿಸಿದ್ದಾರೆ.
ಅವರ ಪ್ರಕಾರ, “ನಾವು ಗಾಂಧೀಜಿ, ನೆಹರು, ಅಂಬೇಡ್ಕರ್ ಮತ್ತು ಟಾಗೋರ್ ಅವರ ಕೃತಿಗಳನ್ನು ಸೇರಿಸಿದ್ದೇವೆ. ಹಾಗೆಯೆ ಪಠ್ಯಕ್ರಮದಲ್ಲಿ ಸಾವರ್ಕರ್ ಮತ್ತು ಗೋಲ್ವಾಲ್ಕರ್ ಅವರ ಕೃತಿಗಳು ಒಳಗೊಂಡಿದೆ. ವಿದ್ಯಾರ್ಥಿಗಳು ಎಲ್ಲಾ ಸಿದ್ಧಾಂತಗಳ ಹಿಂದಿನ ಮೂಲ ಪಠ್ಯವನ್ನು ಕಲಿಯಲಿ ಮತ್ತು ಅರ್ಥಮಾಡಿಕೊಳ್ಳಲಿ. ಸಾವರ್ಕರ್ ಮತ್ತು ಗೋಲ್ವಾಲ್ಕರ್ ಹೇಳಿದ್ದು ಪ್ರಸ್ತುತ ಭಾರತದ ರಾಜಕೀಯದ ಭಾಗವಾಗಿದೆ. ಅದನ್ನು ಕಲಿಯುವುದರಲ್ಲಿ ತಪ್ಪೇನು.?” ಎಂಬ ಪ್ರತಿಕ್ರಿಯೆ ಕೂಡಾ ಬುದ್ದಿಜೀವಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಈ ಬಗ್ಗೆ ಕೇರಳದಲ್ಲಿ ತೀವ್ರ ಚರ್ಚೆಗಳಾಗುತ್ತಿವೆ. ಇವರಿಬ್ಬರ ಪಠ್ಯದ ಪ್ರತಿಯನ್ನು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ದೇವರ ನಾಡಿನ ನಾಡಿನ ಕಮ್ಯೂನಿಸ್ಟ್ ನಾಯಕರೇ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಒಟ್ಟಾರೆ RSS ಸಿದ್ಧಾಂತಗಳ ವಿರುದ್ಧ ತೀವ್ರ ಹೋರಾಟದ ಮೂಲಕ ನೆಲೆ ಕಂಡುಕೊಂಡಿರುವ ಕಮ್ಯೂನಿಸ್ಟ್ ಸರ್ಕಾರ ಇರುವ ಕೇರಳದಲ್ಲಿ ಇಂಥಾ ಬೆಳವಣಿಗೆ ಪ್ರಜ್ಞಾವಂತರಲ್ಲಿ ಅಚ್ಚರಿ ಮೂಡಿಸಿದೆ. ಬ್ರೀಟಿಷರೊಂದಿಗೆ ಕೈ ಜೋಡಿಸಿ ಭಾರತದ ವಿರುದ್ಧವೇ ಪಿತೂರಿ ನಡೆಸಿದ ಗೋಳ್ವಾಲ್ಕಾರ್ ಹಾಗೂ ಸಾವರ್ಕರ್ ಬಗ್ಗೆ ಕೇರಳದಂಥಾ ರಾಜ್ಯದ ವಿಶ್ವ ವಿದ್ಯಾಲಯವೊಂದರ ಪಠ್ಯವಾಗಿರುವುದು ಈಗ ಹಲವು ಅನುಮಾನಗಳಿಗೆ ಹಾಗೂ ಆಕ್ರೋಶಕ್ಕೆ ಆದಿ ಹಾಡಿದೆ

























Discussion about this post