ಚಿಕ್ಕಮಗಳೂರು: ಲಕ್ಕವಳ್ಳಿ ಕಂದಾಯ ನಿರೀಕ್ಷಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆ ವತಿಯಿಂದ ನೀಡಿದ ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಹೋಬಳಿಯ ಕಂದಾಯ ನಿರೀಕ್ಷಕ ಸೋಮಶೇಖರ್ ಅವರ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸುವ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ವೃಂದದ ನೌಕರರು ತಮ್ಮ ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ಜಿಲ್ಲಾಡಳಿತದೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು, ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಜಿಲ್ಲಾಡಳಿತದ ರಕ್ಷಣೆ ಇರುತ್ತದೆ ಹಾಗೂ ಮುಂಬರುವ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಉದ್ಭವವಾಗಬಾರದು ಅಥವಾ ಸರ್ಕಾರಿ ನೌಕರರ ಆತಸ್ಥೈರ್ಯ ಕುಗ್ಗಬಾರದು ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ನೌಕರ ಮಿತ್ರರನ್ನು ಕಾಲ ಕಾಲಕ್ಕೆ ಸೇರಿಸಿ ಕಾರ್ಯಗಾರ ನಡೆಸುವ ಹಾಗೂ ಅವರ ಕುಂದು ಕೊರತೆಗಳನ್ನು ಚರ್ಚಿಸಿ ಧೈರ್ಯ ತುಂಬುವಂತಹ ಸಮ್ಮೀಲನ ಕಾರ್ಯಕ್ರಮವನ್ನು ಕೈಗೊಳ್ಳುತ್ತೇವೆ ಎಂದ ಅವರು ಖಂಡಿತವಾಗಿಯೂ ತಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೆಂದ್ರ ಅವರು ಮಾತನಾಡಿ, ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಹೋಬಳಿಯ ಕಂದಾಯ ನಿರೀಕ್ಷಕರಾದ ಸೋಮಶೇಖರ್ ಅವರ ಆತ್ಮಹತ್ಯೆಯ ಘಟನೆಯಿಂದಾಗಿ ಇಲಾಖೆಯ ನೌಕರರ ಮಾನಸಿಕ ಸ್ಥೈರ್ಯ ಕುಸಿದಂತಾಗಿದೆ ಹಾಗೂ ಕಾನೂನು ಬಾಹಿರ ಕೆಲಸವನ್ನು ಮಾಡಿಸಲು ಕೆಲವರು ಹೆಚ್ಚಿನ ಒತ್ತಡವನ್ನು ನೌಕರರ ಮೇಲೆ ಹೇರುತ್ತಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್ ರೂಪ, ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್, ಸರ್ಕಾರಿ ನೌಕರರ ಸಂಘದ ಗೌರವಧ್ಯಕ್ಷರಾದ ಓಂಕಾರಸ್ವಾಮಿ, ಕಾರ್ಯದರ್ಶಿ ಸತ್ಯ ನಾರಯಣ, ಖಜಾಂಚಿ ಚಂದ್ರಪ್ಪ, ಸಂಘದ ಪದಾಧಿಕಾರಿಗಳಾದ ಶಿವ ಕುಮಾರ್, ಸಿದ್ಧಮೂರ್ತಿ, ವಸಂತ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post