ಶೃಂಗೇರಿ: ಕೋವಿಡ್ ಸಂಕಷ್ಟ ಸಮಯದಲ್ಲಿ ಹಣ್ಣು, ತರಕಾರಿ, ಹೂವು ಬೆಳೆದ ಕೃಷಿಕರಿಗೆ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ನೀಡಲು ಬೆಳೆ ಸಮೀಕ್ಷೆ ಪೂರಕವಾಗಿ ಕಾರ್ಯನಿರ್ವಹಿಸಿದೆ ಎಂದು ಕೊಪ್ಪ ಲ್ಯಾಂಪ್ ಸೊಸೈಟಿ ಉಪಾಧ್ಯಕ್ಷ ಕೆಂಪಣ್ಣ ತಿಳಿಸಿದರು.
ತೋಟಗಾರಿಕೆ ಮತ್ತು ಕೃಷಿಇಲಾಖೆ ಹಾಗೂ ಕೊಪ್ಪ ಲ್ಯಾಂಪ್ ಸೊಸೈಟಿ ಆಶ್ರಯದಲ್ಲಿ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ನಡೆದ ಡಾ.ಎಂ.ಎಚ್.ಮರಿಗೌಡ ಅವರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ “ಬೆಳೆ ಸಮೀಕ್ಷೆ ೨೦೨೧-ತಂತ್ರಾಂಶದ ಉಪಯೋಗ-ಬಳಕೆ” ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬೆಳೆ ಸಮೀಕ್ಷೆ ಆಧಾರಿತ ದತ್ತಾಂಶವನ್ನು ಪರಿಗಣಿಸಿ ರೈತರಿಗೆ ಬ್ಯಾಂಕುಗಳಲ್ಲಿ ಬೆಳೆಸಾಲ ನೀಡಲಾಗುತ್ತಿದೆ ಎಂದರು.
ತೋಟಗಾರಿಕೆ ಮಹತ್ವವನ್ನು ದೇಶಕ್ಕೆ ತಿಳಿಸಿಕೊಟ್ಟು ಅದರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದರು ಡಾ.ಎಂ.ಎಚ್.ಮರಿಗೌಡರು, ಬೆಳೆ ಬೆಳೆದವರಿಗೆ ಸರಿಯಾದ ಬೆಲೆ ಸಿಗಬೇಕೆಂಬ ಉದ್ದೇಶವಿಟ್ಟು ಹಾಪ್ಕಾಮ್ಸ್ ಆರಂಭಿಸಿದರು. ಕೃಷಿಕರಿಗೆ ಬೇಕಾದ ಬಿತ್ತನೆ ಬೀಜ,ಹಣ್ಣಿನ ಸಸಿಗೆ ಸೊಸೈಟಿಯನ್ನು ತೆರೆದರು. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಇಲಾಖೆಯ ಕಚೇರಿಗಳು ಬರಲು ಕಾರಣಕರ್ತರಾದ ಡಾ.ಎಂ.ಎಚ್.ಮರಿಗೌಡ ಅವರ ದೂರದೃಷ್ಟಿತ್ವ ಎಲ್ಲರಿಗೂ ಮಾದರಿ ಎಂದರು.
ಬೆಳೆ ಸಮೀಕ್ಷೆ-೨೦೨೧ರ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾತನಾಡಿ, ಬೆಳೆ ಪ್ರದೇಶಗಳ ನಿಖರ ಮಾಹಿತಿಗಾಗಿ ಸಮೀಕ್ಷೆ ಅತ್ಯಂತ ಸಹಕಾರಿ. ಬೆಳೆ ಸಮೀಕ್ಷೆ ಚಟುವಟಿಕೆಗಳಿಂದ ಸಂಗ್ರಹಿಸಲಾದ ದತ್ತಾಂಶಗಳನ್ನು ಸರ್ಕಾರದ ಕನಿಷ್ಠ ಬೆಂಬಲಯೋಜನೆ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು ಮುಂತಾದ ಯೋಜನೆಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ವಹಿಸಿದರು.ಲ್ಯಾಂಪ್ ಸೊಸೈಟಿ ನಿರ್ದೇಶಕ ಚಂದ್ರಶೇಖರ್ ಇದ್ದರು. ಭಾಗವಹಿಸಿದ ಫಲಾನುಭವಿಗಳಿಗೆ ತೆಂಗಿನ ಗಿಡ ಹಾಗೂ ಗೇರು ಗಿಡಗಳನ್ನು ಉಚಿತವಾಗಿ ನೀಡಲಾಯಿತು.

























Discussion about this post