ಚಿಕ್ಕಮಗಳೂರು: ಹಟಾತ್ ನಿರೀಕ್ಷೆಗೂ ಮೀರಿ ಗಿರಿ ಪ್ರದೇಶ ವೀಕ್ಷಿಸಲು ಪ್ರವಾಸಿಗರು ಜಿಲ್ಲೆಯ ಗಿರಿ ಶ್ರೇಣಿಗಳ ಕಡೆಗೆ ಜಮಾಯಿಸುತ್ತಿದ್ದು, ಕೈಮರ ಚೆಕ್ ಪೋಸ್ಟ್ ನಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು, ಸ್ಥಳೀಯರು ಪರದಾಟ ನಡೆಸಿದ ಘಟನೆ ನಡಿದಿದೆ.
ಮುಳ್ಳಯ್ಯನ ಗಿರಿಶ್ರೇಣಿಗಳಿಗೆ ಭಾರಿ ಸಂಖ್ಯೆಯ ಪ್ರವಾಸಿಗರು ಕಾರು, ಜೀಪು, ಬಸ್ ಗಳಲ್ಲಿ ಜಮಾಯಿಸುತ್ತಿದ್ದು, ರಸ್ತೆಯ ಮೇಲೆ ಕಿ.ಮೀ. ಗಟ್ಟಲೆ ವಾಹನಗಳ ಸಾಲು ಸಾಲು ನಿಂತು ಕಿವಿಗಡಚಿಕ್ಕುವ ಹಾರ್ನ್ ಮಾಡುತ್ತಾ ಕಾಲಹರಣ ಮಾಡುತ್ತಿದ್ದುದು ಇಂದು ಸಹಜವಾಗಿ ನೋಡಬಹುದಿತ್ತು.
ಚಿಕ್ಕಮಗಳೂರು ರಸ್ತೆಯಿಂದ ಗಿರಿಗೆ ಹೋಗುವ ರಸ್ತೆ, ತರೀಕೆರೆ ಕಡೆಗೆ ತೆರಳುವ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಟ್ರಾಫಿಕ್ ಜಾಮ್ ನಿವಾರಿಸಲು ಹರಸಾಹಸ ಮಾಡಬೇಕಾಗಿತ್ತು. ಇದೇ ವೇಳೆ ಪೊಲೀಸ್-ಪ್ರವಾಸಿಗರ ನಡುವೆ ಮಾತಿನ ಪೈಪೋಟಿ ಮಿತಿಮೀರಿತ್ತು.
ವಾರಾಂತ್ಯದಲ್ಲಂತೂ ಇದು ಕಾಮನ್ ಪ್ರಾಬ್ಲಂ ಆಗಿ ಹೋಗಿದೆ, ನಮಗೆ ವಾಹನಗಳ ದಟ್ಟನೆ, ಅವುಗಳ ಶಬ್ಧ, ವಾಯುಮಾಲಿನ್ಯದಿಂದ ಬೇಸರವಾಗಿದೆ ಎಂದು ಸ್ಥಳೀಯ ವಯೋವೃದ್ಧರು ಕನ್ನಡನಾಡಿಗೆ ತಿಳಿಸಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಖಡಕ್ ನಿಯಮಗಳನ್ನು ಮಾಡಬೇಕಾದ ಜಿಲ್ಲಾಡಳಿತಕ್ಕೆ ಪ್ರವಾಸಿ ದಂಡು ಒಂದು ರೀತಿಯ ತಲೆನೋವಾಗಿ ಪರಿಣಮಿಸಿದೆ.
ಬೆಳಿಗ್ಗೆ ೧೫೦ ವಾಹನ, ಸಂಜೆ ೧೫೦ ವಾಹನ ಅಂತ ನಿಯಮ ಮಾಡಿದ್ದ ಜಿಲ್ಲಾಡಳಿತ ಈಗ ಸಾರ್ವಜನಿಕರ ಆಕ್ರೋಶ ಎದುರಿಸುತ್ತಿದೆ. ಇದೇ ವೇಳೆ ಪ್ರವಾಸಿಗರ ದಂಡಿನಿಂದ ಪರಿಸರ ಮಾಲಿನ್ಯ, ಶಬ್ಧ ಮಾಲಿನ್ಯದ ಆತಂಕಗಳು ಇಲ್ಲದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮರ್ಪಕ ನಿಯಮ ತರಬೇಕೆಂದು ಸ್ಥಳೀಯರು ಕಾದು ನೋಡುತ್ತಿದ್ದಾರೆ.

























Discussion about this post