ಚಿಕ್ಕಮಗಳೂರು: ಇಲ್ಲಿಗೆ ೩ ವರ್ಷ ೨ ತಿಂಗಳಹಿಂದೆ ಕೊಲೆಯಾಗಿದ್ದ ಅನ್ವರ್ ಸಾವಿಗೆ ಕಾರಣರಾದವರನ್ನು ಇನ್ನೂ ಬಂಧಿಸಿಲ್ಲ. ಇದರಿಂದ ಬೇಸತ್ತು ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಸಿದ್ದರಾಗಿದ್ದ ಕುಟುಂಬಸ್ಥರಿಗೆ ಆಗಸ್ಟ್ ೧೫ರಂದು ಗೃಹಮಂತ್ರಿ ಅರಗ ಜ್ಞಾನೇಂದ್ರ ಸಕಾರಾತ್ಮಕ ಭರವಸೆ ನೀಡಿದ್ದರು.
ಇದರ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿ, ಕೊಲೆ ಪ್ರಕರಣ ತನಿಖೆ ಚುರುಕುಗೊಳಿಸಿದ್ದಾರೆ. ಚಿಕ್ಕಮಗಳೂರಿನ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡ ಅನ್ವರ್ ನಗರದ ಗೌರಿಕಾಲುವೆಯಲ್ಲಿರುವ ಗುಡ್ ಮಾರ್ನಿಂಗ್ ಶಾಪ್ ಬಳಿ ಕೊಲೆಯಾಗಿದ್ದ. ಅನ್ವರ್ ಡ್ರ್ಯಾಗನ್ ನಿಂದ ಆರು ಕಡೆ ಚುಚ್ಚಲ್ಪಟ್ಟಿದ್ದ. ರಾತ್ರಿ ಸುಮಾರು ೮-೩೦ರ ಹೊತ್ತಿಗೆ ರಾಜಾರೋಷವಾಗಿ ಕೊಲೆ ಮಾಡಿದ ವ್ಯಕ್ತಿಗಳು ಸ್ಥಳದಿಂದ ಜೂಟ್ ಹೇಳಿದ್ದರು.
ಮರುದಿನ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆಗಿದ್ದ ಎಸ್.ಪಿ ಅಣ್ಣಾಮಲೈ ಪರಿಸ್ಥಿತಿ ಸುಧಾರಣೆಗೆ ತಂದಿದ್ದರು. ಮೂವರು ಎಸ್ಪಿಗಳು ಬಂದರೂ ಪ್ರಕರಣದ ಅಸಲಿಯತ್ತು ಬಯಲಿಗೆ ಬರಲಿಲ್ಲ.
ಆರೋಪಿಗಳು ಮಾತ್ರ ಇದುವರೆಗೆ ಪತ್ತೇನೇ ಆಗಿಲ್ಲ. ಕುಟುಂಬಸ್ಥರು ಗಾಂಧಿ ಪ್ರತಿಮೆ ಎದುರು ಉಪವಾಸ ಕೂತಿದ್ದರು. ೨೦೧೯ರಲ್ಲಿ ಪ್ರಕರಣ ಸಿಬಿಐ ಅಥವಾ ಎಸ್ಐ ಟಿಗೆ ವಹಿಸುವಂತೆ ಪಟ್ಟು ಹಿಡಿದಾಗ, ಅನ್ವರ್ ಕೊಲೆ ಸಿಐಡಿಗೆ ಹಸ್ತಾಂತರಿಸಲಾಯಿತು.
ಇದೀಗ ಅರಗ ಜ್ಞಾನೇಂದ್ರ ಅವರೇ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು ಅನುಮಾನ ಬಂದವರ ವಿಚಾರಣೆ ನಡೆಯುತ್ತಿದೆ. ಅನ್ವರ್ ಕುಟುಂಬಕ್ಕೆ ಹೊಸ ಭರವಸೆ ಮೂಡಿದ್ದು ದಯಾಮರಣಕ್ಕೆ ಅರ್ಜಿ ಹಾಕುವುದಿಲ್ಲ ಎಂದಿದ್ದಾರೆ.
ಬಿಜೆಪಿ ಸರ್ಕಾರ ಇದ್ರೂ, ಬಿಜೆಪಿ ಮುಖಂಡನ ಕೊಲೆ ಚಿದಂಬರ ರಹಸ್ಯವಾಗಿ ಉಳಿದಿರೋದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

























Discussion about this post