ಚಿಕ್ಕಮಗಳೂರು : ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ದರದ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಚಿಕ್ಕಮಗಳೂರು ಜಿಲ್ಲಾ ಯುವಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್‍ಯುವ ಕಾಂಗ್ರೆಸ್ ಸಮಿತಿ ಮುಖಂಡರು ಕಾರ್ಯಕರ್ತರು ಶುಕ್ರವಾರ ನಗರದ ಆಜಾದ್ ಪಾರ್ಕ್ ವೃತ್ತದ ಎದುರು ಸಿಲಿಂಡರ್ ಬದಲಿಗೆ ಸೌದೆ ಒಲೆ ಇಟ್ಟು ಸರ್ಕಾರದ ನಡೆಯ ವಿರುದ್ದ ಧಿಕ್ಕಾಗಿ ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಕೆಪಿಸಿಸಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ ಬಿಜೆಪಿ ಸರ್ಕಾರವು ಸುಳ್ಳು ಆಶ್ವಾಸನೆ ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದು ಇದೀಗ ಬೆಲೆ ಏರಿಕೆ ಮೂಲಕ ಆರ್ಥಿಕತೆಯನ್ನೇ ಬುಡಮೇಲು ಮಾಡುತ್ತಿದೆ. 2014 ರ ಕಾಂಗ್ರೆಸ್ ಅವಧಿಯಲ್ಲಿ ಇದ್ದ ಪೆಟ್ರೋಲ್, ಡಿಸೇಲ್ ದರಕ್ಕೂ ಇಂದಿನ ಬಿಜೆಪಿ ಆಡಳಿತ ವ್ಯವಸ್ಥೆಯಲ್ಲಿನ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಜಿಡಿಪಿ ಮೌಲ್ಯ ಕುಸಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜತೆಯಲ್ಲಿ ತುಲನೆ ಮಾಡಿಕೊಳ್ಳಬೇಕಿದ್ದ ಭಾರತ ಇಂದು ಪಾಕಿಸ್ತಾನ, ಅಫ್‍ಘಾನಿಸ್ತಾನದಂತಹ ರಾಷ್ಟ್ರದೊಟ್ಟಿಗೆ ಹೋಲಿಕೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕತೆ ಸಂಪೂರ್ಣ ಕುಸಿತವಾಗಿದ್ದು ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಇಂತರ ದುರಾಡಳಿತ ವ್ಯವಸ್ಥೆಯ ವಿರುದ್ದ ಜನತೆ ಜಾಗೃತಗೊಳ್ಳಬೇಕಿದೆ. ಸಂಘಟಿತರಾಗಿ ಗಟ್ಟಿಧ್ವನಿಯ ಮೂಲಕ ಸರ್ಕಾರವನ್ನು ಎಚ್ಚರಿಸಬೇಕಿದೆ, ಬಿಜೆಪಿಯು ರೈತರು, ಕಾರ್ಮಿಕರು, ಇದೀಗ ಜನಸಾಮಾನ್ಯರ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ದೇಶವನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ದೂಷಿಸಿದರು.
ಬೆಲೆ ಏರಿಕೆಯಿಂದಾಗಿ ದೇಶದ ಜನರು ತತ್ತರಿಸಿಹೋಗಿದ್ದಾರೆ ಈ ಬಗ್ಗೆ ರಾಷ್ಟ್ರೀಯ ನಾಯಕರು ಆಗಿರುವ ಶಾಸಕ ಸಿ.ಟಿರವಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಕಾರವೆತ್ತುತ್ತಿಲ್ಲ, ದೇಶದಲ್ಲಿ ದುರಾಡಳಿತದ ಅಚ್ಚೆದಿನ್ ಶುರುವಾಗಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ದೇಶದ ಜನತೆ ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ರಾಷ್ಟ್ರವನ್ನಾಗಿಸಿ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಕೆಪಿಸಿಸಿ ಕಿಸಾನ್ ಸೆಲ್‍ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಮಾತನಾಡಿ ದೇಶದಲ್ಲಿ ಕಾಂಗ್ರೆಸ್ 70 ವರ್ಷದಿಂದ ಸಾಧಿಸಿಕೊಂಡು ಬಂದಿದ್ದ ಯೋಜನೆ ಅಭಿವೃದ್ಧಿ ಕಾರ್ಯಗಳನ್ನು ನರೇಂದ್ರ ಮೋದಿಯವರು ಬಂದ 7 ವರ್ಷದಲ್ಲಿ ಸಂಪೂರ್ಣವಾಗಿ ಆರ್ಥಿಕತೆ ಕುಸಿಯುವಂತೆ ಮಾಡಿದ್ದಾರೆ. ಇದೊಂದು ಭ್ರಷ್ಟ ಸರ್ಕಾರ, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಏರಿಕೆ ಮಾಡಿ ಜನಸಾಮಾನ್ಯರಿಂದ ಹಣ ಲೂಟಿ ಮಾಡುವ ಪ್ರಯತ್ನ ನಡೆಸಿದೆ ಎಂದು ಆಕ್ರೋಶ ಹೊರಹಾಕಿದರು.
ದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಲು ಸಾಧ್ಯವಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒಪ್ಪಿಸಲಿ. ಈಗಾಗಲೇ ಆರ್ಥಿಕತೆ ಕುಸಿತಕಂಡಿದ್ದು, ನಿರುದ್ಯೋಗ, ಬಡತನ ಹೆಚ್ಚಾಗುತ್ತಿದೆ. ಖಾಸಗೀಕರಣದ ಮೂಲಕ ದೇಶದ ಸರ್ಕಾರಿ ಸಂಸ್ಥೆಗಳನ್ನು ಅದಾನಿ, ಅಂಬಾನಿಯಂತಹ ಬಂಡವಾಳಷಾಹಿಗಳ ಕೈಗೆ ಒಪ್ಪಿಸಲು ಬಿಜೆಪಿ ಮುಂದಾಗಿದೆ, ತೈಲ ದರ ಇಳಿಕೆ ಮಾಡದಿದ್ದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರವನ್ನು ಕೆಡವಿ ಮತ್ತೊಂದು ಹೊಸ ಸರ್ಕಾರ ರಚಿಸುವ ಸಾಮಥ್ರ್ಯವಿರುವ ರಾಜ್ಯ ನಾಯಕರಿಗೆ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಇಳಿಸುವ ಸಾಮಥ್ರ್ಯವಿಲ್ಲವೇ? ಎಂದು ಪ್ರಶ್ನಿಸಿದ ಅವರು ಬಿಜೆಪಿಯಲ್ಲಿ ರಾಜ್ಯದ 28 ಸಂಸದರಿದ್ದು ಕೇಂದ್ರವನ್ನು ಪ್ರಶ್ನಿಸುವ ಸಾಮಥ್ರ್ಯವಿಲ್ಲವೇ ದೇಶದ ಜನತೆ ಇದರ ವಿರುದ್ದ ಜಾಗೃತಿ ಅಗತ್ಯವಿದೆ, ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಶಪಥ ಮಾಡಬೇಕಿದೆ ಎಂದರು.
ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ ಕಾಂಗ್ರೆಸ್ ಅವಧಿಯಲ್ಲಿ ತುಸು ಅಡುಗೆ ಅನಿಲ ದರ ಹೆಚ್ಚಳವಾಗಿದ್ದಕ್ಕೆ ಬೀದಿಗಳಲ್ಲಿ ಮಲಗಿ ಹೋರಾಟ ನಡೆಸಿದ್ದ ಕ್ಷೇತ್ರದ ಶಾಸಕರು, ಹಾಗೂ ಸಂಸದರು ಹೀಗ್ಯಾಕೆ ಮೌನವಹಿಸಿದ್ದಾರೆ. ಬೆಲೆ ಏರಿಕೆ ವಿರುದ್ದ ಮಾತನಾಡಲಿ ಎಂದು ಸವಾಲು ಎಸೆದರು.
ಕ್ಷೇತ್ರದಲ್ಲಿನ ಜನರ ಸಂಕಷ್ಟ ಆಲಿಸದೆ, ಕಾಂಗ್ರೆಸ್ ನಾಯಕರನ್ನು ಅವಹೇಳನಕಾರಿಯಾಗಿ ಟೀಕಿಸುವಲ್ಲಿ ಸ್ಥಳೀಯ ಶಾಸಕರು ಕಾಲ ಕಳೆಯುತ್ತಿದ್ದಾರೆ. ಬೆಲೆ ಏರಿಕೆ ಬಿಸಿಯಿಂದಾಗಿ ಜನಸಾಮಾನ್ಯನ ಬದುಕು ದುಸ್ಥರವಾಗಿದೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದು ಬೆಲೆ ಇಳಿಕೆ ಯಾಕೆ ಸಾಧ್ಯವಾಗುತ್ತಿಲ್ಲ, 7 ವರ್ಷದಿಂz ದೇಶದಲ್ಲಿÀ ಅಭಿವೃದ್ಧಿ ಬದಲಾಗಿ ಬರೀ ಪ್ರಚಾರದಲ್ಲಿಯೇ ಪ್ರಧಾನಿಗಳು ಸಾಕಷ್ಟು ಹಣ ವ್ಯಯ ಮಾಡಲಾಗಿದೆ ಇದೇ ಅವರ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‍ನ ಡಿ.ಎಲ್.ವಿಜಯ್‍ಕುಮಾರ್, ರವೀಶ್ ಕ್ಯಾತನಬೀಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಸೇರಿದಂತೆ ಮತ್ತಿತರರು ಕೇಂದ್ರದ ಬೆಲೆ ಏರಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ರಸೂಲ್‍ಖಾನ್, ಜಿ.ಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ನಗರಾಧ್ಯಕ್ಷ ತನೋಜ್‍ಕುಮಾರ್, ಕಾಂಗ್ರೆಸ್ ವಕ್ತಾರರಾದ ಹಿರೇಮಗಳೂರು ರಾಮಚಂದ್ರ, ರೂಬೆನ್ ಮೊಸಸ್, ಸಿಲ್ವಸ್ಟರ್, ಯುವಕಾಂಗ್ರೆಸ್ ಸಂತೋಷ್, ಮುಖಂಡರಾದ ಜಗದೀಶ್, ಗಂಗಾಧರ್, ಮಹಿಳಾ ಕಾಂಗ್ರೆಸ್‍ನ ಚೇತನಾ, ಸಂದೇಶ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post