ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ರೈತರು, ನಿರಾಶ್ರಿತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹಿಂದೆ ಬಿದ್ದಿರುವ, ಹಾಗೂ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಸರಕಾರದ ವಿರುದ್ಧ ಹೋರಾಟ ನಡೆಸಲು ಪಕ್ಷ ಸಿದ್ದ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಕಸಬಾ ಹೋಬಳಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ಬೇಸತ್ತು ಜನರು ಪ್ರಾದೇಶಿಕ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ. ಜನರು ಪಕ್ಷದ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕಿದೆ. ಕೊಡಗಿನಲ್ಲಿ ಅತಿವೃಷ್ಟಿಯಾದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಕೂಡಲೇ ಎಲ್ಲಾ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಟ್ಟಿದ್ದರು. ರೈತರ ಸಾಲ ಮನ್ನ ಮಾಡಿದ್ದರು. ಅಲ್ಲದೇ ಅಧಿಕಾರವಿಲ್ಲದಿದ್ದ ಸಮಯದಲ್ಲಿ ರೈತರ ಸಂಕಷ್ಟ ನೋಡಿ ಪ್ರತಿ ರೈತರಿಗೂ 50 ಸಾವಿರ ರೂ ಸಹಾಯಧನ ನೀಡಿದ್ದರು ಇಂತಹ ಅನೇಕ ಜನಪರವಾದ ಕಾರ್ಯಕ್ರಮ ರೂಪಿಸಲು ಜೆಡಿಎಸ್‍ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಇದೇ ಸಮಯ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜು ಮಾತನಾಡಿ, ಇಲ್ಲಿನ ಎಂಎಲ್‍ಎ, ಉಪ ಸಭಾಪತಿ ಹಾಗೂ ಮಾಜಿ ಸಚಿವೆ ಇವರಿಗೆ ಅಧಿಕಾರ ಬೆಂಬಲವಿದೆ. ಇದರಿಂದ ರಾಜಾರೋಷವಾಗಿ ಅಕ್ರಮವಾಗಿ ಮರಳು ಪಡೆದಿರುವುದು ತಾಲೂಕಿನ ಜನತೆಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಬಡವರಿಗೆ ಆಶ್ರಯ ಮನೆ ಕಟ್ಟಿಕೊಳ್ಳಲು 1 ಲೊಡ್ ಮರಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಇನ್ನೂ ಮನೆ ಕಟ್ಟಿಸಿಕೊಟ್ಟಿಲ್ಲ. ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮದ ವಿರುದ್ಧ ನಮ್ಮ ಕಾರ್ಯಕರ್ತರು ಧ್ವನಿ ಎತ್ತಬೇಕು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ ಎಚ್.ಡಿ.ದೇವೇಗೌಡರ ಜನಪರ ಕಾರ್ಯಕ್ರಮದ ಬಗ್ಗೆ ಪ್ರತಿ ಹಳ್ಳಿ ಹಳ್ಳಿ ಜನರಿಗೆ ಮಾಹಿತಿ ನೀಡುವ ಮೂಲಕ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕೆಂದು ಕರೆ ಎಚ್. ಎಚ್ . ದೇವರಾಜ್ ಪಕ್ಷದವರಿಗೆ ಕರೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಜೆಡಿಎಸ್ ಕಸಬಾ ಹೋಬಳಿ ಅಧ್ಯಕ್ಷ ಎಂ.ಕೆ.ರವಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ಮುಖಂಡರಾದ ಬಾಲಕೃಷ್ಣೇಗೌಡ, ಡಿ.ಬಿ.ಅಶ್ವಥ್, ಮಂಜಪ್ಪಗೌಡ, ಬಿ.ಎಂ.ಬೈರೇಗೌಡ, ಜಕರಿಯಾ ಜಾಕೀರ್, ಸುಧಾ ಮಂಜುನಾಥ್, ಜ್ಯೋತಿ ವಿಠಲ್, ಶಬ್ಬೀರ್ ಅಹಮ್ಮದ್, ಎಂ.ಎಸ್.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

























Discussion about this post