ಚಿಕ್ಕಮಗಳೂರು: ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನ ಮತ್ತು ಇಂಜಿನಿಯರುಗಳ ದಿನದ ಅಂಗವಾಗಿ ಬುಧವಾರ ಇಂಜಿನಿಯರುಗಳ ಸಂಘದ ವತಿಯಿಂದ ತಾಲೂಕಿನ ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದಿಹಳ್ಳಿಯಲ್ಲಿರುವ ರೈನಿ ಸಂಶೋಧನಾ ಮತ್ತು ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿ ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು.
ಪ್ರಸ್ತುತ ದಿನಮಾನಗಳಲ್ಲಿ ದೇಶ ಎದುರಿಸುತ್ತಿರುವ ನೀರು ಸಮಸ್ಯೆ ಮತ್ತು ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಕೊಯ್ಲು ಮಾಡುವ ಮೂಲಕ ಅಂತರ್ಜಲ ಹೆಚ್ಚಿಸುವ ಕುರಿತು ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಅಮೂಲ್ಯವಾದ ಮಾಹಿತಿಗಳನ್ನು ಪ್ರಾತ್ಯಕ್ಷಿತೆ ಮೂಲಕ ನೀಡಿದರು.
ವಿ-ವೈಯರ್ ತಂತ್ರಜ್ಞಾನದಿಂದ ನಿರ್ಮಿಸಿರುವ ಇಂಜೆಕ್ಷನ್ ವೆಲ್ ಮೂಲಕ ಮಳೆಯ ನೀರು ಕೊಯ್ಲು ಮಾಡಿ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸುವುದು, ಅಂತರ್ಜಲ ವೃದ್ಧಿಸುವುದು, ಈ ತಂತ್ರಜ್ಞಾನದ ಮೂಲಕ ಜಲ ಪ್ರಳಯ ನಿಯಂತ್ರಣ ಮಾಡುವುದು, ಅತಿ ಕಡಿಮೆ ವೆಚ್ಚದಲ್ಲಿ ಮೊಡುಲರ್ ಟ್ಯಾಂಕ್ನಲ್ಲಿ ಮಳೆಯ ನೀರು ಸಂಗ್ರಹಿಸಿಸುವ ವಿಧಾನ, ಚಾವಣಿಯಲ್ಲಿ ಹರಿದು ಬರುವ ಮಳೆಯ ನೀರಿನಲ್ಲಿರುವ ಅತಿ ಸೂಕ್ಷ್ಮ ಧೂಳು, ಕಸ ಕಡ್ಡಿ, ಎಲೆ ಸೇರಿದಂತೆ ಕಲ್ಮಶಗಳನ್ನು ಪ್ರತ್ಯೇಕಿಸುವ ರೈನಿ ಫಿಲ್ಟರ್ ಅಳವಡಿಸುವ ವಿಧಾನ, ಅವುಗಳು ಗುರುತ್ವಾಕರ್ಷಣೆ ಮೂಲಕ ನಿರ್ವಹಿಸುವ ಕಾರ್ಯ ವಿಧಾನಗಳು, ಮಳೆಯ ಪ್ರತಿ ಹನಿಯನ್ನು ಹಿಡಿದಿಡುವ ಮಹತ್ವ ಮತ್ತು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅನಾಹುತಗಳು, ಅಪಾಯಗಳನ್ನು ತಪ್ಪಿಸಲು ಮತ್ತು ಮುಂದಿನ ಪೀಳಿಗೆಗೆ ನೀರಿನ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದು, ಜೊತೆಗೆ ಮಳೆ ನೀರು ಕೊಯ್ಲು ನವೀನ ತಂತ್ರಜ್ಞಾನದ ವಿಧಾನಗಳನ್ನು ಇಂಜಿನಿಯರುಗಳು ಆಸಕ್ತಿಯಿಂದ ಪಡೆದುಕೊಂಡರು.
ರೈನಿ ಸಂಶೋಧನಾ ಕೇಂದ್ರದಲ್ಲಿ ಅಳವಡಿಸಿರುವ ವಿವಿಧ ತಂತ್ರಜ್ಞಾನದ ರೈನಿ ಫಿಲ್ಟರ್ಗಳ ಪ್ರಾತ್ಯಕ್ಷಿತೆ ಮತ್ತು ಜಲ ಮರುಪೂರ್ಣ ವಿವಿಧ ವಿಧಾನಗಳನ್ನು ಇಂಜಿನಿಯರುಗಳಿಗೆ ಪ್ರಯೋಗದ ಮೂಲಕ ವಿವರಣೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎ.ನಾಗೇಂದ್ರ ಮಾತನಾಡಿ, ಮಳೆಯ ನೀರು ಕೊಯ್ಲು ಬಗ್ಗೆ ಕೇಳಿದ್ದ ನಮಗೆ ಇಲ್ಲಿ ಬಂದು ನೋಡಿದಾಗ ಇಂತಹ ಅದ್ಭುತವಾದ ಮತ್ತು ಅಪರೂಪದ ಸಂಸ್ಥೆ ನಮ್ಮ ಜಿಲ್ಲೆಯಲ್ಲಿರುವುದು ಹೆಮ್ಮೆ ಎನಿಸಿತು. ಒಂದು ರೀತಿಯಲ್ಲಿ ಮರಳುಗಾಡಿನಲ್ಲಿ ನೀರಿನ ಚಿಲುಮೆ ಕಂಡಂತ ಅನುಭವವಾಯಿತು. ಇಂತಹ ಸಂಸ್ಥೆ ನಮ್ಮ ಜಿಲ್ಲೆಯಲ್ಲಿರುವುದು ಇಂಜಿನಿಯರುಗಳಾದ ನಮಗೆ ಒಂದು ರೀತಿಯಲ್ಲಿ ನವೀನತೆ ತಿಳಿದುಕೊಳ್ಳಲು ಅವಕಾಶವಾಗಿದೆ. ಒಂದು ಹನಿ ನೀರಿಗೂ ಎಷ್ಟೊಂದು ಮಹತ್ವ ಇದೆ ಎಂಬುದು ಇಲ್ಲಿ ಬಂದು ನೋಡಿದಾಗ ಮತ್ತು ಮಾಹಿತಿಗಳನ್ನು ಪಡೆದುಕೊಂಡಾಗ ಹೊಸ ಅನುಭವ ನಮಗಾಯಿತು. ಈ ತಂತ್ರಜ್ಞಾನವನ್ನು ಎಲ್ಲಾ ಇಂಜಿನಿಯರುಗಳು ಹೊಸ ನಿರ್ಮಾಣದ ಸಂದರ್ಭಗಳಲ್ಲಿ ಅಳವಡಿಸುವ ಮೂಲಕ ವ್ಯರ್ಥವಾಗಿ ಹೋಗುವ ಮಳೆ ನೀರು ಮರು ಬಳಕೆಗೆ ಪ್ರಯತ್ನಿಸಬೇಕು ಎಂದು ಸಂಸ್ಥೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಕೆನರಾ ಬ್ಯಾಂಕ್ ಸಹಾಯಕ ಮಹಾ ವ್ಯವಸ್ಥಾಪಕ ರಾಘವೇಂದ್ರ ರಾವ್ ಕನಲ ಮಾತನಾಡಿ, ಮೈಕ್ರೋ, ಸ್ಮಾಲ್ ಮತ್ತು ಮೀಡಿಯಂ ಉದ್ಯಮಗಳಿಗಾಗಿ ನಮ್ಮ ಬ್ಯಾಂಕಿನಲ್ಲಿ ಸಾಕಷ್ಟು ಯೋಜನೆಗಳಿವೆ. ನಿಮ್ಮ ಐಡಿಯಾಗಳಿಗೆ ನಮ್ಮ ಬ್ಯಾಂಕಿನಲ್ಲಿ ಸೌಲಭ್ಯಗಳಿವೆ. ಸೂಕ್ತ ದಾಖಲೆಗಳನ್ನು ಒದಗಿಸುವುದರ ಜೊತೆಗೆ ಪಡೆದ ಸೌಲಭ್ಯದ ಮರುಪಾವತಿಯನ್ನಷ್ಟೆ ಬ್ಯಾಂಕು ಬಯಸುತ್ತದೆ. ಜಿಲ್ಲೆಯಲ್ಲಿ ಉದ್ಯಮಗಳನ್ನು ಬೆಳೆಸುವ, ಪೋತ್ಸಾಹಿಸುವ ಕಾರ್ಯವನ್ನು ಬ್ಯಾಂಕ್ ನಿರಂತರ ಮಾಡಿಕೊಂಡು ಬರುತ್ತಿದೆ ಎಂದು ಮಳೆ ನೀರು ಕೊಯ್ಲು ಕೇಂದ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಕರ್ನೆ ಶ್ರೀರಾಮುಲು ಬ್ಯಾಂಕ್ ಸಾಲದ ಸಾಲ ಸೌಲಭ್ಯಗಳು ಮತ್ತು ಯೋಜನೆಗಳ ಕುರಿತು ಮಾಹಿತಿಗಳನ್ನು ನೀಡಿದರು. ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಿ ಸವಿತಾ, ಇಂಜಿನಿಯರ್ಸ್ ಅಸೋಸಿಯೇಷನ್ ಕೋ ಆರ್ಡಿನೇಟರ್ ಕಿರಣ್, ಉಪಾಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷರಾದ ಹರೀಶ್, ಮಲ್ಲಪ್ಪ, ನಾಗೇಂದ್ರ, ಕಾಶಿಪ್ರಸಾದ್, ವೆಸ್ಲಿ ಪಿಂಟೋ, ರಾಘವೇಂದ್ರ, ದೊಡ್ಡೇಗೌಡ, ಮಲ್ಲೇಶ್, ರೈನಿ ಸಂಶೋಧನಾ ಮತ್ತು ಉತ್ಪಾದನಾ ಕೇಂದ್ರದ ಪಾಲುದಾರರಾದ ವಿಜಯರಾಜ್, ಸುನಿಲ್ ಬ್ಯಾಪ್ಟಿಸ್ಟ್ ಹಾಜರಿದ್ದರು. ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವಿಶ್ವನಾಥ್ ವಂದಿಸಿದರು.

























Discussion about this post