ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಸ ಬೇಕೆಂದು ಆಗ್ರಹಿಸಿ ಎ.ಐ.ಟಿ.ಯುಸಿ ನೇತೃತ್ವದಲ್ಲಿ ತೋಟಕಾರ್ಮಿಕರು ನಗರದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಹಾಗೂ ಪ್ರಧಾನಿ ನರೇಂದ್ರಮೋದಿಯವರ ವಿರುದ್ದ ಘೋಷಣೆಗಳನ್ನು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಗುಣಶೇಖರನ್ ಮಾತನಾಡಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿ ದರು.
ರಸಗೊಬ್ಬರ, ಔಷಧಿ, ಮತ್ತಿತರ ವಸ್ತುಗಳ ಬೆಲೆ ಹೆಚ್ಚಳದಿಂದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕಾರಣ ಈ ಸಮರ್ಪಕ ವೇತನ, ಮೂಲಭೂತ ಸೌಲಭ್ಯಗಳನ್ನು ನೀಡಲಾಗದಿರುವುದರಿಂದ ಕಾರ್ಮಿಕರು ಜೀವನ ದುಸ್ತರವಾಗಿದೆ ಎಂದು ಹೇಳಿದರು.
ತೋಟ, ಕ್ಯೂರಿಂಗ್ ಕಾರ್ಮಿಕರಿಗೆ ಪ್ರಸ್ತುತ ೪೫೮ ರೂಪಾಯಿ ೯೬ ಪೈಸೆ ಕನಿಷ್ಠ ವೇತನ ನೀಡಲಾಗುತ್ತಿದ್ದು ಇಂದಿನ ಬೆಲೆ ಏರಿಕೆಯಲ್ಲಿ ಕಾರ್ಮಿಕರು ಜೀವನ ನಡೆಸುವುದೇ ತೊಂದರೆಯಾಗಿದೆ ಅದನ್ನು ೬೦೦ ರೂಪಾಯಿಗಳಿಗೆ ಹೆಚ್ಚಿಸಬೇಕು.
ತೋಟಕಾರ್ಮಿಕರು ಬಹುತೇಕ ತೋಟದ ಲೈನ್ಗಳಲ್ಲಿ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಅವರಿಗೆ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ಮನೆ ನಿರ್ಮಿಸಿ ನೀಡಬೇಕೆಂದು ಆಗ್ರಹಿಸಿದರು. ಮಲೆನಾಡು ಭಾಗದ ಬಹಳಷ್ಟು ಪ್ರದೇಶಗಳಲ್ಲಿ ಕಾಡುಪ್ರಾಣಿಗಳು ಲಗ್ಗೆಯಿಡುತ್ತಿದ್ದು ನಿರಂತರವಾಗಿ ಸಾವುಗಳು ಸಂಭವಿಸುತ್ತಿದ್ದರೂ ಸಾವಿಗೆ ಕೇವಲ ೭ ಲಕ್ಷ ರೂಪಾಯಿಗಳ ಪರಿಹಾರ ನೀಡಿ ಕೈಚೆಲ್ಲುತ್ತಿದೆ.
ಪ್ರಾಣಿಗಳ ಹಾವಳಿ ತಪ್ಪಿಸಲು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕಾಡುಪ್ರಾಣಿಗಳ ಧಾಳಿಗೆ ಸಿಲುಕಿಗೆ ಮೃತಪಟ್ಟವರಿಗೆ ಕನಿಷ್ಠ ೨೫ ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕೆಂದು ಹೇಳಿದರು.
ಉಪಾಧ್ಯಕ್ಷ ಬಿ.ಅಮ್ಜದ್ ಮಾತನಾಡಿ ಅಸ್ತಿತ್ವದಲ್ಲಿದ್ದ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿಗೊಳಿಸಿ ೪ ಸಂಹಿತೆಗಳನ್ನಾಗಿ ರೂಪಿಸಿ ಜಾರಿಮಾಡಿರುವುದರಿಂದ ಶೇ.೮೦ರಷ್ಟು ಕಾರ್ಮಿಕರು ಕಾನೂನುಬದ್ದ ಸೌಲಭ್ಯಗಳಿಂದ ವಂಚಿತರನ್ನಾಗಿಸುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು. ದೇಶದ ಆರ್ಥಿಕತೆಯ ಮೂಲ ಕತೃಗಳಾದ ಕಾರ್ಮಿಕರನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಬಲವಂತವಾಗಿ ಅವರ ಮೇಲೆ ಹೇರಿ ಅವರ ಬದುಕುಗಳನ್ನು ನಾಶಗೊಳಿಸಲು ಹೊರಟಿದೆ ಎಂದು ಹರಿಹಾಯ್ದರು.
ಕಟ್ಟಡ ಕಾರ್ಮಿಕರ ಅಧ್ಯಕ್ಷ ಜಿ.ರಘು ಮಾತನಾಡಿ ಸರ್ಕಾರಗಳ ಬೆಲೆ ಏರಿಕೆ ನೀತಿಯಿಂದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರಿದ್ದು ಕೂಡಲೇ ಬೆಲೆ ಇಳಿಕೆಗೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಮುಖಂಡರಾದ ಮಣಿಬಾಲನ್, ಕುಮಾರ್, ಕೃಷ್ಣ, ಸುಶೀಲಾ, ಕಣ್ಣಿಯಮ್ಮ, ಸೇರಿದಂತೆ ನೂರಾರು ತೋಟಕಾರ್ಮಿಕರು ಇದ್ದರು.

























Discussion about this post