ಚಿಕ್ಕಮಗಳೂರು: ಇಂಧನ ಇಲಾಖೆಯು ಸಾರ್ವಜನಿಕರ ಸಮಸೈಗಳನ್ನು ಆಲಿಸಿ ಪರಿಹರಿಸುವ ಮೂಲಕ ಜನಸ್ನೇಹಿಯಾಗುವಂತೆ ಕೆಲಸ ಮಾಡಿ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ಕುಮಾರ್ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು
ಅಕ್ಟೋಬರ್ ೦೪ ರಂದು ಜಿಲ್ಲಾಧಿಕಾರಿಗಳ ಕಛೇರಿ ಸಂಭಾಂಗಣದಲ್ಲಿ ನಡೆದ ಮೆಸ್ಕಾಂ ನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಸೆ.೧೮ ರಿಂದ ಇಲಾಖೆಯಿಂದ ೧೦೦ ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ೧೦೦ ದಿನದ ಕಾರ್ಯಕ್ರಮ ಭಾಷಣಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಇಂಧನ ಇಲಾಖೆಯು ಅನೇಕ ಜನ ಸ್ನೇಹಿ ಅಭಿವೃದ್ಧಿ ಯೋಜನೆಗಳನ್ನು ಮಾಡಲು ಮುಂದಾಗಿದೆ ಅದಕ್ಕೆ ಇಲಾಖೆಯ ಎಲ್ಲಾ ಅಧಿಕಾರಿಗಳ ಸಹಕಾರ ಮುಖ್ಯ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಎಷ್ಟು ಪರಿವರ್ತಕಗಳು ಬೇಸಿಗೆ ಕಾಲದಲ್ಲಿ ಕೆಟ್ಟು ಹೋಗಿವೆ ಅವುಗಳನ್ನು ಹೇಗೆ ಮರುಬಳಕೆ ಮಾಡಲಾಗುತ್ತಿದೆ ಎಂಬುದರ ಕುರಿತ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ಅವರು ಪರಿವರ್ತಕಗಳ ದುರಸ್ಥಿ ಮಾಡಲು ದುರಸ್ಥಿ ಸೆಂಟರ್ ಗಳ ಸಾಮಾರ್ಥ್ಯ ಎಷ್ಟಿದೆ, ಸಮಸ್ಯೆಗಳಿದ್ದರೆ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಹೇಳಿದರು.
ದುರಸ್ಥಿಪಡಿಸುವ ಪರಿವರ್ತಕಗಳನ್ನು ತೆಗೆದುಕೊಂಡು ಹೋಗಲು ಜಿಲ್ಲೆಗೆ ಎಷ್ಟು ವಾಹನಗಳ ಅವಶ್ಯಕತೆ ಇದೆ ಎಂಬುದನ್ನು ತಿಳಿಸಿದರೆ ವಾಹನಗಳ ಖರೀದಿಗೆ ಬೇಕಾಗುವ ಅನುದಾನ ಒದಗಿಸಲಾಗುವುದು ಎಂದರು,
ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಅಧಿಕಾರಿಗಳು ರೈತರುಗಳಿಂದ ಲಂಚ ಪಡೆದ ಬಗ್ಗೆ ದೂರುಗಳು ಕೇಳಿಬಂದಲ್ಲಿ ೪೮ ಗಂಟೆಯೊಳಗೆ ಅಧಿಕಾರಿಯನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ಅವರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕಂದಾಯ ಜಾಗದಲ್ಲಿ ಹೊಸದಾಗಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಯಾವುದೇ ನಿರಪೇಕ್ಷಣಾ ಪತ್ರ ಇಲ್ಲದೇ ನೇರವಾಗಿ ಮೆಸ್ಕಾಂಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ರಹಿತ ಕುಟುಂಬಗಳಿಗೆ ಶೀಘ್ರವೇ ವಿದ್ಯುತ್ ಸಂಪರ್ಕವನ್ನು ಕಲ್ಪಸಬೇಕೆಂದ ಅವರು ಕುಡಿಯುವ ನೀರಿನ ಪೂರೈಕೆಗೆ ಸರಿಯಾಗಿ ವಿದ್ಯುತ್ ಸಂಪರ್ಕವನ್ನು ಪೂರೈಸುವಂತೆ ಮತ್ತು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕವನ್ನು ತಕ್ಷಣ ನೀಡುವಂತೆ, ಇನ್ನೂ ಜಿಲ್ಲೆಯಲ್ಲಿ ಬಾಕಿ ಇರುವ ೨೨೧ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ೩೦ ದಿನಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದ ಅವರು ೨೪ ಗಂಟೆಯೊಳಗಾಗಿ ಕೆಟ್ಟು ಹೋದ ಪರಿವರ್ತಕಗಳನ್ನು ಬದಲಾಹಿಸಲು ಇರುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಟಿ.ರವಿ, ಕಡೂರು ವಿಧಾನ ಸಭಾ ಶಾಸಕ ಬೆಳ್ಳಿ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ,ಪ್ರಭು, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ಕುಮಾರ್ ಮಿಶ್ರಾ, ಪದ್ಮಾವತಿ, ಸೇರಿದಂತೆ ಮತಿತರರಿದ್ದರು.

























Discussion about this post