ಚಿಕ್ಕಮಗಳೂರು: ಸದ್ಯದಲ್ಲೇ ರಾಜ್ಯದ ಕಾಫಿ ಬೆಳೆಯುವ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ಜಿಲ್ಲೆಗಳ ಬ್ಯಾಂಕರ್ಸ್ ಸಭೆ ಕರೆದು ಆರ್ಬಿಐ ನಿರ್ದೇಶನದಂತೆ ಕಾಫಿ ಬೆಳೆಗಾರರ ಸಾಲ ಮರುಹೊಂದಾಣಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಲು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಬ್ಯಾಂಕರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅತೀವೃಷ್ಠಿ, ಅನಾವೃಷ್ಠಿ ಇನ್ನಿತರೆ ಪ್ರಕೃತಿ ವಿಕೋಪಗಳಿಂದಾಗಿ ಶೇ.೩೩ಕ್ಕಿಂತಲೂ ಹೆಚ್ಚು ಪ್ರಮಾಣದ ಬೆಳೆ ಹಾನಿ ಸಂಭವಿಸಿದಲ್ಲಿ ಸಾಲ ಮರು ಹೊಂದಾಣಿಕೆ ಮಾಡಿಕೊಡಬೇಕು. ಸಾಲ ಮರುಪಾವತಿಸುವುದಕ್ಕೆ ೧ ವರ್ಷ ರಿಯಾಯ್ತಿ ನೀಡಬೇಕು ಹಾಗೂ ೬ ರಿಂದ ೭ ವರ್ಷಗಳ ಕಾಲ ಕಂತುಗಳಿಗೆ ಬಡ್ಡಿ ವಿಧಿಸಬಾರದು. ಇದು ಸುಸ್ತಿ ಆಗಿರುವ ಸಾಲಗಾರರು ಸೇರಿದಂತೆ ಎಲ್ಲ ರೀತಿಯ ಸಾಲಗಾರರಿಗೂ ಅನ್ವಯಿಸಬೇಕು ಎಂದು ಆರ್ಬಿಐ ನಿರ್ದೇಶನ ನೀಡಿದೆ ಆದರೆ ಕೆಲವು ಬ್ಯಾಂಕುಗಳು ಇದಾವುದನ್ನೂ ಪಾಲಿಸುತ್ತಿಲ್ಲ ಎಂದರು.
ಈ ಕುರಿತು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಫಿ ಮಂಡಳಿ ಮತ್ತು ಬ್ಯಾಂಕರ್ಸ್ ಸಭೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ಆರ್ಬಿಐ ನಿಂದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ಗೆ ನೀಡಿರುವ ನಿರ್ದೇಶನದ ಪ್ರಕಾರ ಬೆಳೆಗಾರರಿಗೆ ಸಾಲ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಪ್ರತಿಕ್ರಿಯಿಸಿ ಮುಂದಿನ ೮ ದಿನಗಳ ಒಳಗಾಗಿ ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬ್ಯಾಂಕರ್ಸ್ ಸಭೆ ಕರೆದು ಆರ್ಬಿಐ ನಿರ್ದೇಶನಗಳನ್ನು ಜಾರಿಗೆ ತರುವಂತೆ ಸ್ಥಳೀಯ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸಭೆಗೆ ಬೆಳೆಗಾರ ಸಂಘಟನೆಗಳ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಕಳೆದ ೨೦೧೬ ರಿಂದ ಈ ವರೆಗೆ ಬರಗಾಲ, ಅತೀವೃಷ್ಟಿ, ಕೋವಿಡ್-೧೯ ಇನ್ನಿತರೆ ಕಾರಣಗಳಿಂದಾಗಿ ಕಾಫಿ ತೋಟಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಕಾಫಿ ಮಂಡಳಿಯನ್ನೂ ಸೇರಿಸಿಕೊಂಡು ಕಂದಾಯ, ತೋಟಗಾರಿಕೆ ಇಲಾಖೆಗಳು ಜಂಟೀ ಸಮೀಕ್ಷೆ ನಡೆಸಿ ಕ್ರೂಢೀಕರಿಸಿರುವ ವರದಿ ಪ್ರಕಾರ ಶೇ.೩೦ ರಿಂದ ೫೦ ರವರೆಗೂ ಬೆಳೆ ಹಾನಿ ಸಂಭವಿಸಿದೆ. ಕೆಲವಡೆ ಭೂಮಿ ಹಾನಿ ಸಂಭವಿಸಿದೆ. ಮೂಲ ಸೌಕರ್ಯ ಹಾಗೂ ಜನ, ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಇದೆಲ್ಲವನ್ನೂ ಪರಿಗಣಿಸಿ ಸಾಲ ಮರುಹೊಂದಾಣಿಕೆ ಮತ್ತು ಇತರೆ ಸೌಲಭ್ಯ ನೀಡಬೇಕು ಎಂದು ಬ್ಯಾಂಕರ್ಸ್ ಸಭೆಯಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಹೊಸ ಸಾಲವನ್ನೂ ಮಂಜೂರು ಮಾಡಬೇಕು. ಈ ಸಂದರ್ಭದಲ್ಲಿ ಮತ್ತೆ ಸೆಕ್ಯುರಿಟಿ ಕೇಳಬಾರದು. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ರಫ್ತು ಆಧಾರಿತ ಬೆಳೆಯಾಗಿರುವುದರಿಂದ ಶೇ.೪ ರಷ್ಟು ಮಾತ್ರ ಬಡ್ಡಿ ವಿಧಿಸಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಏಕ ಕಂತಿನಲ್ಲಿ ಸಾಲ ತೀರುವಳಿ ಸೌಲಭ್ಯ ಪಡೆದ ಬೆಳೆಗಾರರಿಗೆ ಮತ್ತೆ ಸಾಲ ನೀಡುವುದಿಲ್ಲ ಎಂದು ಬ್ಯಾಂಕ್ಗಳು ಹೇಳುತ್ತಿವೆ. ಅದು ತಪ್ಪಬೇಕು. ಅಂತಹವರಿಗೂ ಹೊಸದಾಗಿ ಸಾಲ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಕಾಫಿಯನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡಬೇಕು ಎನ್ನುವ ಮತ್ತೊಂದು ಪ್ರಮುಖ ಬೇಡಿಕೆಯನ್ನೂ ಬ್ಯಾಂಕರ್ಸ್ ಮುಂದೆ ಇಡಲಾಗಿದೆ. ಈ ವರೆಗೆ ಕಾಫಿಗೆ ಕೃಷಿ ಎಂದೇ ಸಾಲ ನೀಡಲಾಗಿದೆ. ನಬಾರ್ಡ್, ಕಿಸಾನ್ ಕ್ರೆಡಿಟ್ ಕಾರ್ಡ್, ಅಭಿವೃದ್ಧಿ ಸಾಲ ಹೀಗೆ ವಿವಿಧ ಸಾಲಗಳನ್ನು ನೀಡಲಾಗಿದೆ. ಆದರೆ ಈಗ ಸರ್ಫೇಸಿ ಕಾಯ್ದೆಯನ್ನು ಮುಂದು ಮಾಡಿ ಕಾಫಿಯನ್ನು ಉದ್ದಿಮೆ ಎಂದು ಹೇಳುತ್ತಾ ಬ್ಯಾಂಕುಗಳು ನೋಟಿಸು ನೀಡುತ್ತಿವೆ. ಕಾಫಿ ಬೆಳೆಯುವ ಕೇರಳ, ತಮಿಳು ನಾಡು ರಾಜ್ಯಗಳಲ್ಲಿ ಕಾಫಿಯನ್ನು ಸರ್ಫೇಸಿ ಕಾಯ್ದೆ ವ್ಯಾಪ್ತಿಗೆ ತಂದಿಲ್ಲ. ನಮ್ಮ ರಾಜ್ಯದಲ್ಲೂ ಕಾಫಿಯನ್ನು ಹೊರಗಿಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಸುಮಾರು ೬೦ ರಿಂದ ೭೦ ವರ್ಷಗಳಿಂದ ಕಾಫಿ ಬೆಳೆಗಾರರು ಸಾಲ ಪಡೆದು ಮರುಪಾವತಿಸುತ್ತಿದ್ದಾರೆ. ಶೇ.೫ ರಷ್ಟು ಜನರೂಸಹ ಬ್ಯಾಂಕ್ಗೆ ಮೊಸ ಮಾಡಿಲ್ಲ. ಈಗ ಪ್ರಕೃತಿ ವಿಕೋಪ, ಇನ್ನಿತರೆ ಅನಾಹುತಗಳಿಂದಾಗಿ ಬೆಳೆಗಾರ ಕಷ್ಟದಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಸರ್ಫೇಸಿ ಕಾಯ್ದೆಯಡಿ ಸಾಲ ವಸೂಲಾತಿಗೆ ಬ್ಯಾಂಕುಗಳು ಮುಂದಾಗಬಾರದು ಇದೇ ವೇಳೆ ಟಿಡಿಎಸ್ನಿಂದಲೂ ರಿಯಾಯ್ತಿ ನೀಡಬೇಕು ಎಂದು ಮನವಿ ಮಾಡುತ್ತೇವೆ ಎಂದರು.

























Discussion about this post