ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತರ ಹಿತದೃಷ್ಟಿಯಿಂದ ಕೇಂದ್ರವು ಬಹುಮುಖ್ಯವಾದ ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ದೇವನೂರಿನಲ್ಲಿ ದಾಳಿಂಬೆ ಬೆಳೆಗಾರರ ರೈತ ಉತ್ಪಾದಕಾ ಸಂಸ್ಥೆಯ ಶಾಖೆಯನ್ನು ಉದ್ಘಾಟನೆ ನಡೆಸಿ ಈ ವಿಷಯ ತಿಳಿಸಿದರು.
ಬೆಳೆನಾಶ ಪರಿಹಾರ ಪಡೆಯುವಲ್ಲಿ ಫಸಲ್ ಬಿಮಾ ಯೋಜನೆ ಆಪ್ ಬಿಡುಗಡೆ ಮಾಡಿ ಇನ್ನಷ್ಟು ಸರಳ ಪ್ರಕ್ರಿಯೆ ಮಾಡಿದೆ. ರೈತ ತನ್ನ ಹೊಲದಲ್ಲಿ ಪೋಟೋ ತೆಗೆದು ಕಳಿಸಿದ್ದರೆ ಖಾತೆಗೆ ಸದರಿ ಪರಿಹಾರದ ಮೊತ್ತ ಜಮೆಯಾಗುವುದು. ಈ ವಿನೂತನ ಯೋಜನೆಯನ್ನು ದೇಶವ್ಯಾಪಿ ಅಳವಡಿಸುವ ಉದ್ದೇಶ ಇದೆ ಎಂದು ತಿಳಿಸಿದರು.
ತೆಂಗು ಬೆಳೆಯ ಮಾರುಕಟ್ಟೆಯನ್ನು ವಿದೇಶಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದ್ದು, ಮುಂಬರುವ ವರ್ಷ ತೆಂಗಿನ ಬೆಲೆ ದುಪ್ಪಟ್ಟಾಗುವ ವಿಶ್ವಾಸ ವ್ಯಕ್ತಪಡಿಸಿದರು. ಕಾಫಿ ಮಂಡಳಿಯ ರೀತಿಯಲ್ಲಿ, ತೆಂಗು ಬೆಳೆಗಾರರೇ ತೆಂಗು ಮಂಡಳಿ ಅಧ್ಯಕ್ಷ ಮತ್ತು ನಿರ್ದೇಶಕರಾಗುವಂತೆ ಆದೇಶ ಹೊರಡಿಸಿರುವುದಾಗಿ ಹೇಳಿದರು.
ರೈತರು ಬಳಸುವ ಟ್ರ್ಯಾಕ್ಟರ್, ಟಿಲ್ಲರ್ ಬೆಲೆಗಳು ರಾಜ್ಯಾದ್ಯಂತ ಏಕರೀತಿಯಲ್ಲಿರುವಂತೆ, ವೆಬ್ ಸೈಟ್ ಪ್ರಕಟಣೆ, ಕೃಷಿ ಇಲಾಖೆ ಆನ್ ಲೈನ್ ನಲ್ಲಿ ಮಾಹಿತಿಯನ್ನು ನೀಡುವಂತೆ ಸೂಚನೆ ಹೊರಡಿಸಲಾಗಿದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ಕೃಷಿಕ ಚಟ್ನಳ್ಳಿ ಮಹೇಶ್, ದೇವನೂರು ರವಿ ಮತ್ತಿತರರು ಉಪಸ್ಥಿತರಿದ್ದರು. ಕೇಂದ್ರ ಸಚಿವರಾದ ಮೇಲೆ ಮೊದಲ ಬಾರಿಗೆ ಆಗಮಿಸಿದ್ದು ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುವ ಉತ್ಸಾಹ ಹೊಂದಿದ್ದಾರೆ.

























Discussion about this post