ಚಿಕ್ಕಮಗಳೂರು: ಸೆ. ೧೭ ರಂದು ನಡೆದ ಸೂಪರ್ ಕೋವಿಡ್ ಬೃಹತ್ ಲಸಿಕಾ ಮೇಳಕ್ಕೆ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಕೋವಿಡ್ ಲಸಿಕಾ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ೭೫ ಸಾವಿರಕ್ಕೂ ಹೆಚ್ಚು ಲಸಿಕೆ ನೀಡುವ ಗುರಿ ಹೊಂದಲಾಗಿದ್ದು ಅದರಂತೆ ಜಿಲ್ಲಾದ್ಯಂತ ೨೩೦ ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಲಸಿಕಾ ಮೇಳ ನಡೆದಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಎಲ್ಲಾ ಸಮುದಾಯ ಆರೋಗ್ಯ ಕೇಂದ್ರ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ೧೮ ವರ್ಷ ಮೇಲ್ಪಟ್ಟ ಫಲಾನುಭವಿಗಳು ಸ್ವಯಂ ಪ್ರೇರಿತವಾಗಿ ಆಗಮಿಸಿ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿತ್ತು, ಅದರಂತೆ ಗ್ರಾಮಮಟ್ಟದಲ್ಲಿ ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಸಾಕಷ್ಟು ಪ್ರಚಾರ ಕೈಗೊಂಡಿತ್ತು ಆ ಹಿನ್ನಲೆ ಸಾರ್ವಜನಿಕರು ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಇದರಿಂದಾಗಿ ಕೋವಿಡ್ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇ.೧೦೦ ರಷ್ಟು ಗುರಿ ಸಾಧಿಸುವ ಉದ್ದೇಶ ಹೊಂದಲಾಗಿದ್ದು ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು ಹಾಗೂ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳು ಜಿಲ್ಲಾಡಳಿತದೊಟ್ಟಿಗೆ ಕೈಜೋಡಿಸಿದೆ. ಮೊದಲ ಹಾಗೂ ೨ನೇ ಡೋಸ್ ಲಸಿಕೆ ಪಡೆದುಕೊಳ್ಳದವರು ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಲಸಿಕಾ ಮೇಳ ಸಹಕಾರಿಯಾಗಿದೆ ಎಂದರು.
ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ ಸೆ.೧೭ ರಂದು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಏಕಕಾಲಕ್ಕೆ ಕೋವಿಡ್ ಲಸಿಕಾ ಮೇಳ ನಡೆದಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ತಮ್ಮ ಆರೋಗ್ಯದ ಜತೆಗೆ ಕುಟುಂಬದ ರಕ್ಷಣೆಗೆ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳುವಂತೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲಾಗಿತ್ತು ಅದರಂತೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.
ಲಸಿಕಾ ಮೇಳಕ್ಕೆ ಸ್ಥಳೀಯ ಮಟ್ಟದಲ್ಲಿ ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಜನಪ್ರತಿನಿಧಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಚಾರ ಹಾಗೂ ಜಾಗೃತಿ ಪರಿಣಾಮ ಹೆಚ್ಚು ಮಂದಿ ಕೋವಿಡ್ ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಹೆಚ್ಚು ಆದ್ಯತೆ ನೀಡಿ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಮಾತನಾಡಿ ೧೮ ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಇದುವರೆಗೆ ೬,೨೭,೨೪೮ ಮಂದಿಗೆ ಮೊದಲ ಡೋಸ್ ಮತ್ತು ೨,೩೦,೨೯೭ ಮಂದಿಗೆ ೨ನೇ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಕೋವಿಡ್ ಲಸಿಕಾ ಮಹಾಮೇಳದಲ್ಲಿ ಜಿಲ್ಲಾಧ್ಯಂತ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು ಕೋವ್ಯಾಕ್ಸಿನ್, ಕೋವಿಶೀಲ್ಡ್ಗಳನ್ನು ಎಲ್ಲಾ ಲಸಿಕಾ ಕೇಂದ್ರದಲ್ಲಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಆರ್ಸಿಹೆಚ್ ಡಾ.ಭರತ್ ಮಾತನಾಡಿ ಜಿಲ್ಲೆಯಲ್ಲಿ ೬೪,೦೬೦ ಕೋವಿಶೀಲ್ಡ್ ಹಾಗೂ ೪,೧೧೦ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು ಮೊದಲ ಹಾಗೂ ೨ನೇ ಹಂತದ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ಪಡೆಯುವವರು ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಳ್ಳುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸುವಂತೆ ಕೇಳಿಕೊಂಡರು.
ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ, ಕೈಮರ, ಮಲ್ಲಂದೂರು, ಹಾಗೂ ಕಡೂರು ತಾಲ್ಲೂಕಿನ ಸಿಂಗಟಗೆರೆ, ಯಗಟಿ, ಹಿರೇನಲ್ಲೂರು, ತರೀಕೆರೆ, ಅಜ್ಜಂಪುರ, ಎನ್ಆರ್.ಪುರ, ಶೃಂಗೇರಿ ಸೇರಿದಂತೆ ಎಲ್ಲೆಡೆ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಂಡಿದ್ದಾರೆ. ವಂಚಿತರು ನಿರ್ಲಕ್ಷ್ಯ ತೋರದೆ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್, ಜಿಲ್ಲಾಸರ್ಜನ್ ಡಾ.ಮೋಹನ್ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸೀಮಾ, ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಇದ್ದರು.

























Discussion about this post