ಚಿಕ್ಕಮಗಳೂರು: ಜಗತ್ತಿನ ಹೆಸರಾಂತ ವಿಶ್ವವಿದ್ಯಾನಿಲಯದಲ್ಲಿ ಒಂದಾಗಿರುವ ಜರ್ಮನಿಯ ಎಸ್‌ಆರ್‌ಎಚ್ ವಿಶ್ವವಿದ್ಯಾನಿಲಯದಲ್ಲಿ ಕಾಫಿ ನಾಡಿನ ಕುವರ ಮನೋಜ್ ಸಾಮುಯಲ್ ಬ್ಯಾಪ್ಟಿಸ್ಟ್ ಮಂಡಿಸಿರುವ ಪ್ರೌಡ ಪ್ರಬಂಧ ಮಾಸ್ಟರ್ ಅವಾರ್ಡ್‌ಗೆ ಪಾತ್ರವಾಗಿದೆ.
ಮನೋಜ್ ಸಾಮುಲ್ ಬ್ಯಾಪ್ಟಿಸ್ಟ್ ಅವರು ಎಸ್‌ಆರ್‌ಎಚ್ ವಿಶ್ವವಿದ್ಯಾನಿಲಯದಲ್ಲಿ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಅಂಡ್ ಇಂಜಿನಿಯರಿಂಗ್(ಎಂಇ) ಸ್ನಾತಕೋತ್ತರ ಪದವೀಧರರಾಗಿದ್ದು, ವಿಶ್ವವಿದ್ಯಾನಿಲಯದ ಸ್ಟಡಿ ಪ್ರೋಗ್ರಾಂ ಡೈರೆಕ್ಟರ್ ವಾಟರ್ ಟೆಕ್ನಾಲಜಿ ವಿಭಾಗದ ಪ್ರೊಫೆಸರ್ ಡಾ.ಉಲ್‌ರಿಕ್ ಗೆಯ್ಹ್ ಮತ್ತು ಸಂಶೋಧನಾ ಸಂಯೋಜಕರಾಗಿರುವ ಫಿನ್‌ಲ್ಯಾಂಡ್ ರಾಯಭಾರಿ ಡಾ.ಟೊರ್‌ಸ್ಟೆನ್ ಸೆಡೆಲ್ ಅವರ ಮಾರ್ಗದರ್ಶನದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮದಲ್ಲಿ ನೀರಿನ ಹೆಜ್ಜೆ ಗುರುತು ವಿಶ್ಲೇಷಣೆ ಮತ್ತು ಅದರ ಸಾಮಾಜಿಕ-ಆರ್ಥಿಕ ಪ್ರಭಾವದ ಮೌಲ್ಯಮಾಪನ ಎಂಬ ವಿಷಯದಲ್ಲಿ ಪ್ರೌಢ ಪ್ರಬಂಧವನ್ನು ಮಂಡಿಸಿದ್ದರು. ಇಂದಿನ ನೀರಿನ ಕೊರತೆ ಜಗತ್ತಿನಲ್ಲಿ ತಂದೊಡ್ಡಬಹುದಾದ ಪೈಪೋಟಿಯ ಕುರಿತ ವಿಚಾರ ಒಳಗೊಂಡಿರುವ ಪ್ರಬಂಧ ವಿಶ್ವವಿದ್ಯಾನಿಲಯದಲ್ಲಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ.
ವಿಶ್ವವಿದ್ಯಾನಿಲಯದಲ್ಲಿ ಸೆ.೨೮ ರಂದು ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಸ್ಟಡಿ ಪ್ರೋಗ್ರಾಂ ಡೈರೆಕ್ಟರ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಡಾ.ಒಜ್ಡೆಮಿರ್ ಅವರು ಮನೋಜ್ ಸಾಮುಯಲ್ ಬ್ಯಾಪ್ಟಿಸ್ಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಎಸ್‌ಆರ್‌ಎಚ್ ವಿಶ್ವವಿದ್ಯಾನಿಲಯ ಜಗತ್ತಿನ ಅತ್ಯಂತ ಹಳೆಯ ಮತ್ತು ದೊಡ್ಡ ಖಾಸಗಿ ವಿಶ್ವವಿದ್ಯಾನಿಲಯವಾಗಿದೆ. ಈ ವಿಶ್ವವಿದ್ಯಾನಿಲಯದಲ್ಲಿ ೬೫ ದೇಶಗಳ ೩೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನಕ್ಕೆ ತಯಾರಿ ನಡೆಸುತ್ತಿದ್ದಾರೆ. ಮನೋಜ್ ಅವರ ನವೀನ ಅಧ್ಯಯನ ಮಾದರಿಯು ೨೦೧೮ ರಲ್ಲಿ ಜೀನಿಯಸ್ ಲೋಸಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದಲ್ಲದೆ ಬೆಂಗಳೂರಿನ ಹೆಸರಾಂತ ರಾಮಯ್ಯ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮನೋಜ್ ಸಾಮುಯಲ್ ಬ್ಯಾಪ್ಟಿಸ್ಟ್ ಮತ್ತು ಅವರ ತಂಡ ಹಸಿರು ಶಕ್ತಿಯನ್ನು ಉತ್ಪಾದಿಸುವ ನವೀವಿನ ರೀತಿಯ ನೀರಿನ ಸುಳಿಯ ಟರ್ಬೈನ್ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಉನ್ನತ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ದೇಶದಲ್ಲಿ ಹೆಸರುವಾಸಿಯಾಗಿರುವ ವಾಟರ್ ಜೆಟ್ ಇಂಜಿನಿಯರ್‍ಸ್, ರೈನಿ ರೀಸರ್‍ಚ್ ಮತ್ತು ಮ್ಯಾನುಫಾಕ್ಚರಿಂಗ್ ಸಂಸ್ಥೆಯ ಸ್ಥಾಪಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಅವರ ಪುತ್ರರಾಗಿರುವ ಮನೋಜ್ ಸಾಮುಯಲ್ ಬ್ಯಾಪ್ಟಿಸ್ಟ್ ಅವರು ಅಂತಾರಾಷ್ಟ್ರ ಮಟ್ಟದಲ್ಲಿ ನೀರಿನ ಕೊರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ಐಡಬ್ಲ್ಯೂಎ-ವರ್ಲ್ಡ್ ವಾಟರ್ ಕಾಂಗ್ರೆಸ್ ೨೦೨೧ ಮತ್ತು ಡೆಮಕ್ರಾಟಿಕ್ ಅಕ್ವಾ ಟೆಕ್ನಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಪ್ರಬಂಧಗಳನ್ನು ಮಂಡಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

























Discussion about this post