ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಅತೀವೃಷ್ಠಿಯಿಂದ ಹೆಚ್ಚಿನ ಹಾನಿ, ಅವಘಡಗಳು ಉಂಟಾಗುತ್ತಲೇ ಇರುವುದರಿಂದ, ಇದರ ಕುರಿತು ಜಿಲ್ಲಾಡಳಿತ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದಲೂ ಮಳೆಗೆ ಭೂಕುಸಿತ, ಮನೆ ಕುಸಿತ, ತೋಟದಲ್ಲಿ ಬೆಳೆ ಹಾನಿ ಇವೆಲ್ಲಾ ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವ ಮಲೆನಾಡಿನಲ್ಲಿ, ಜಿಲ್ಲಾಡಳಿತವು ಸೂಕ್ತ ಸಮೀಕ್ಷೆ ನಡೆಸುವಂತೆ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕಳೆದ ಏಳು ದಿನಗಳಿಂದ ಮತ್ತೆ ಮಳೆ, ಮನೆ ಕುಸಿತ, ರಸ್ತೆ ಹಾನಿ, ಚರಂಡಿ ಸಮಸ್ಯೆಗಳು ಮೊದಲಾದವೆಲ್ಲಾ ಮರುಕಳಿಸುತ್ತಲೇ ಇದ್ದು, ಇದರಿಂದ ಬಹಳ ಅವ್ಯವಸ್ಥೆ ಉಂಟಾಗಿದೆ. ಆದ್ದರಿಂದ ಈ ಕುರಿತು ಜಿಲ್ಲಾಡಳಿತ ವರದಿ ಸಿದ್ದಪಡಿಸುವಂತೆ ಮಾತುಕತೆ ನಡೆಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೃಷಿ ಚಟುವಟಿಕೆ ಮೊಟಕುಗೊಳಿಸಲಾಗಿದ್ದು, ಕಳಸ, ಮೂಡಿಗೆರೆಯಲ್ಲಿ ಹೆಚ್ಚು ಹಾನಿ ನಡೆಯುತ್ತಲೇ ಇದೆ ಎಂದಿದ್ದಾರೆ. ಸರ್ವರ್ ಹಾನಿಯಿಂದ ಕೆಲ ರೈತರಿಗೆ ಸಿಗಬೇಕಾಗಿದ್ದ ಬೆಳೆ ಪರಿಹಾರ ತಲುಪಿಲ್ಲ, ಸರ್ವರ್ ಸರಿಪಡಿಸಿದ್ದು ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅತೀವೃಷ್ಠಿ ಹಾನಿ ಅಧ್ಯಯನಕ್ಕೆ ರಾಜ್ಯ ಅಧಿಕಾರಿಗಳ ತಂಡ ಕಳೆದ ವಾರ ಅಧ್ಯಯನಕ್ಕೆ ಆಗಮಿಸಿ ಸಮೀಕ್ಷೆ ವರದಿ ತಯಾರಿಸಿದೆ ಎಂದು ಸಹ ಇದೇ ವೇಳೆ ತಿಳಿಸಿದರು.
ಊರುಬಗೆ, ಭೈರಾಪುರ, ಕುಂಬರಡಿ, ಗುತ್ತಿ, ತರುವೆ ಗ್ರಾಮಗಳಲ್ಲಿ ಮಳೆ ಅಧಿಕ ಇದ್ದು, ಈ ಭಾಗದಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪನೆ ಅಗತ್ಯ ಎಂದು ಒತ್ತಿ ಹೇಳಿದ್ದಾರೆ. ಕಾಡಾನೆಗಳಿಂದಲೂ ಬೆಳೆ ಹಾನಿ ಉಂಟಾಗುತ್ತಿದೆ. ಜನರಿಗೂ ಒಡಾಡಲು ಸಂಕಷ್ಟ ಇದಿರಾಗಿದೆ. ಕೆಲವು ಕಡೆ ಹೆದರಿ ಕೃಷಿ ಜಮೀನು ಹಾಳುಗೆಡವಲಾಗಿದೆ. ಈ ಎಲ್ಲಾ ಸಮಸ್ಯೆ ಚರ್ಚಿಸಿ ಸರ್ಕಾರಕ್ಕೆ ಅಧಿವೇಶನದಲ್ಲಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

























Discussion about this post