ಚಿಕ್ಕಮಗಳೂರು: ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ವಿಷಯಕ್ಕೆ ಸಂಬಂಧಿಸಿದಂತೆ ಸೆ.೨೮ ರಂದು ಹೈಕೋರ್ಟ್ ಹೊರಡಿಸಿರುವ ಆದೇಶದ ವ್ಯಾಖ್ಯಾನವನ್ನು ಸರ್ಕಾರ ತಿರುಚಲು ಪ್ರಯತ್ನಿಸುತ್ತಿದೆ ಎಂದು ಚಿಂತಕ, ಸಾಮಾಜಿಕ ಹೋರಾಟಗಾರ ಶಿವಸುಂದರ್ ಆರೋಪಿಸಿದ್ದಾರೆ.
ಅರ್ಚಕರನ್ನು ನೇಮಕ ಮಾಡಬೇಕು, ಮುಜಾವರ್ ಅವರನ್ನು ಗರ್ಭಗುಡಿಯಿಂದ ಹೊರಗೆ ಹಾಕಬೇಕು ಅಥವಾ ದರ್ಗಾದ ಪರಿಸರದಲ್ಲಿರುವ ಗೋರಿಗಳನ್ನು ಹೊರಗಡೆ ಕಿತ್ತು ಎಸೆಯಬೇಕು ಎನ್ನುವ ಬಗ್ಗೆ ಹೈಕೋರ್ಟ್ ಆದೇಶದಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಂತ್ರಿಯ ಸ್ಥಾನದಲ್ಲಿರುವ ಸುನೀಲ್ಕುಮಾರ್, ಸಂಘ ಪರಿವಾರ ಮತ್ತು ಕೆಲವು ಬಿಜೆಪಿ ಮುಖಂಡರು ಹಾಗೂ ಕರ್ನಾಟಕ ಸರ್ಕಾರ ತನಗೆ ಬೇಕಾದಂತೆ ಹೈಕೋರ್ಟ್ನ ವ್ಯಾಖ್ಯಾನವನ್ನು ತಿರುಚುತ್ತಾ ಸುಳ್ಳುಗಳನ್ನೇ ಸತ್ಯವಾಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಸಮಿತಿ ಹೂಡಿದ್ದ ದಾವೆಯ ಕುರಿತು ೨೦೨೧ ರ ಸೆ.೨೮ ರಂದು ರಾಜ್ಯ ಹೈಕೋರ್ಟ್ ಜಸ್ಟೀಸ್ ಪಿ.ಎಸ್. ದಿನೇಶ್ಕುಮಾರ್ ಹೊರಡಿಸಿರುವ ಆದೇಶದಲ್ಲಿ ಹೀಗಿದೆ. ಸರ್ಕಾರ ೨೦೧೮ ರಲ್ಲಿ ಮಾಡಿರುವ ಆದೇಶವನ್ನು ರದ್ದುಗೊಳಿಸಲಾಗಿದೆ. ಈ ಪ್ರಕರಣವನ್ನು ಮತ್ತೇ ನಾವು ರಾಜ್ಯ ಸರ್ಕಾರಕ್ಕೆ ವಾಪಸ್ ಕೊಡುತ್ತಿದ್ದೇವೆ, ಉನ್ನತ ಮಟ್ಟದ ಸಮಿತಿ ರಚಿಸಿ ವರದಿಯನ್ನು ಬಿದಿಗೆ ಸರಿಸಿ ಮತ್ತೊಮ್ಮೆ ಹೊಸದಾಗಿ ಕಾನೂನಿನ ಪ್ರಕಾರ ಪರಿಶೀಲಿಸಬೇಕು ಹೀಗೆ ಹೈಕೋರ್ಟ್ ನಿರ್ದೇಶನ ನೀಡಿದಿಯೇ ಹೊರತು ಯಾವುದೇ ಆಚರಣೆಯ ಬದಲಾವಣೆ ಮಾಡಬೇಕೆಂಬ ಸೂಚನೆಯಿಲ್ಲ ಎಂದು ತಿಳಿಸಿದ್ದಾರೆ.
ಉನ್ನತ ಮಟ್ಟದ ಸಮಿತಿಯ ತೀರ್ಮಾನ ಮತ್ತು ಹಿಂದಿನ ಸರ್ಕಾರದ ತೀರ್ಮಾನವನ್ನು ರದ್ದುಪಡಿಸಲಾಗಿದೆ. ಸರ್ಕಾರ ಹೊಸದಾಗಿ ಈ ಪ್ರಕರಣವನ್ನು ಪರಿಶೀಲಿಸಬೇಕು ಎಂಬುದಾಗಿದೆ. ೨೦೧೫ ರ ಸೆ.೩ ರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಸರ್ಕಾರವು ಎಂಡೋಮೆಂಟ್ ಕಮಿಷನರ್ ಕೊಟ್ಟ ತೀರ್ಪಿನ ವಿರೋಧ ಮತ್ತು ಪರ ಹಾಗೂ ಸುಪ್ರೀಂಕೋರ್ಟ್ನಲ್ಲಿ ಅಹವಾಲುದಾರರ ಎಲ್ಲರ ಅಭಿಪ್ರಾಯಗಳನ್ನು ಸರ್ಕಾರ ಪರಿಶೀಲಿಸಿ ಆ ಬಳಿಕವೇ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.
ಅರ್ಚಕರನ್ನು ದಿಡೀರ್ ನೇಮಿಸಬೇಕು, ಗೋರಿಗಳನ್ನು ಸ್ಥಳಾಂತರಿಸಬೇಕು ಮುಜಾವರ್ಗಳ ಅಲ್ಲಿಂದ ತೆಗೆಯಬೇಕು ಎಂಬ ಪ್ರಕ್ರಿಯೆ ಮಾಡುವಂತಿಲ್ಲ ಈ ವಿಷಯಗಳ ಪ್ರಕರಣದಲ್ಲಿ ವಿಚಾರಣೆಯ ವಸ್ತುವೇ ಆಗಿರಲಿಲ್ಲ. ಮುಜಾವರ್ ಜೊತೆಗೆ ಅಲ್ಲಿ ಹಿಂದೂ ಆಗಮ ಪದ್ದತಿಯಲ್ಲಿ ಓರ್ವ ಅರ್ಚಕರು ಇರಬೇಕು ಎಂದು ವಾದವಿದೆ ಹೊರತು ಮುಜಾವರ್ ತೆಗೆಯಬೇಕು, ಗೋರಿಗಳನ್ನು ಸ್ಥಳಾಂತರಿಸಬೇಕು ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

























Discussion about this post