ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಕರಾಳ ಕೃಷಿ ಮಸೂದೆಗೆ ಸಂಬಂಧಿಸಿದಂತೆ ಸಂಯುಕ್ತಾ ಕಿಸಾನ್ ಮೋರ್ಚಾ ನೀಡಿರುವ ಸೆ.27ರ ಭಾರತ್ ಬಂದ್ಗೆ ಜಿಲ್ಲೆಯಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳು ಒಕ್ಕೂರಲ ಬೆಂಬಲ ಸೂಚಿಸಿವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಬಸವರಾಜ್ ತಿಳಿಸಿದರು.
ಶನಿವಾರ ನಗರದಲ್ಲಿ ನಡೆದ ರೈತ ಸಂಘಟನೆ, ವಿವಿಧ ಪಕ್ಷಗಳ ಮುಖಂಡರು ಹಾಗೂ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕೇಂದ್ರ ಸರ್ಕಾರವು ರೈತರಿಗೆ ಮಾರಕವಾಗಿ ಕೃಷಿ ತಿದ್ದುಪಡಿ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ದೆಹಲಿಯ ಗಡಿ ಭಾಗದಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ ಆದರೆ ಸರ್ಕಾರ ರೈತರ ಹಿತ ಕಾಯುವ ಬದಲು ಮರಣ ಶಾಸನದಂತಿರುವ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿರುವುದು ಖಂಡನೀಯ.
ಇದನ್ನು ವಿರೋಧಿಸಿ ಸೆಪ್ಟಂಬರ್ ೨೭ ಕ್ಕೆ ದೆಹಲಿಯ ಸಂಯುಕ್ತಾ ಕಿಸಾನ್ ಮೋರ್ಚಾ ಭಾರತ್ ಬಂದ್ಗೆ ಕರೆ ನೀಡಿದೆ. ಸರ್ಕಾರಕ್ಕೆ ಬಿಸಿಮುಟ್ಟಿಸಲು ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ, ಕನ್ನಡ ಸೇನೆ, ಆಟೋ ಚಾಲಕರ ಸಂಘ ಹಾಗೂ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಜಿಲ್ಲೆಯಲ್ಲಿ ಬಂದ್ ಯಶಸ್ವಿಗೊಳಿಸಲು ಸಂಪೂರ್ಣ ಬೆಂಬಲ ನೀಡಿವೆ ಎಂದು ತಿಳಿಸಿದರು.
ಸಿಪಿಐ ಮುಖಂಡ ಅಮ್ಜದ್ ಮಾತನಾಡಿ ರೈತ ವಿರೋಧಿ ಕಾಯ್ದೆಯಳನ್ನು ಜಾರಿಗೊಳಿಸುವ ಮೂಲಕ ರೈತರನ್ನು ಗುಲಾಮಗಿರಿಗೆ ತಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂತಹ ಕರಾಳ ಮಸೂದೆ ವಿರೋಧಿಸಿ ಸೆ.೨೭ ಕ್ಕೆ ಭಾರತ್ ಬಂದ್ಗೆ ಕರೆ ನೀಡಿದ್ದು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವಂತೆ ವಿವಿಧ ಪಕ್ಷದ ಮುಖಂಡರಲ್ಲಿ ವಿನಂತಿಸಿಕೊಂಡರು.
ರೈತರಿಗೆ ಬೆಂಬಲವಾಗಿ ಜಿಲ್ಲೆಯ ಕಾಂಗ್ರೆಸ್, ಜೆಡಿಎಸ್, ಬಿಎಸ್.ಪಿ. ಕನ್ನಡ ಸೇನೆ ಒಳಗೊಂಡಂತೆ ಎಲ್ಲಾ ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿವೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಬೂತ್ಗಳಲ್ಲಿ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಭಾರತ್ ಬಂದ್ ಪ್ರಯುಕ್ತ ಸೆ.೨೦ ರಂದು ನಗರದ ಎಪಿಎಂಸಿ ಸಭಾಂಗಣದಲ್ಲಿ ರೈತ ಜಾಗೃತಿ ಸಭೆ ಆಯೋಜಿಸಲಾಗಿದ್ದು ರಾಜ್ಯ ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಳಿ ಪಾಟೀಲ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಸಿಪಿಐ ಮುಖಂಡ ರೇಣುಕಾರಾಧ್ಯ, ಡಿಎಸ್ಎಸ್ನ ಮರ್ಲೆ ಅಣ್ಣಯ್ಯ, ರವೀಶ್ ಕ್ಯಾತನಬೀಡು, ಗುರುಶಾಂತಪ್ಪ, ರೂಬೆನ್ ಮೊಸಸ್, ಡಾ|| ಕೆ.ಸುಂದರಗೌಡ, ಹಿರೇಮಗಳೂರು ಪುಟ್ಟಸ್ವಾಮಿ, ಪ್ರಕಾಶ್, ನಟರಾಜ್, ಜೆಡಿಎಸ್ ಮುಖಂಡ ಚಂದ್ರಪ್ಪ, ಲಕ್ಷ್ಮಣ್, ಶ್ರೀನಿವಾಸ್, ದೊಡ್ಡಯ್ಯ, ಅಂಗಡಿ ಚಂದ್ರು, ಉಮೇಶ್, ತೇಗೂರು ಜಗದೀಶ್, ಕಳವಾಸೆ ರವಿ, ರಘು, ಸುರೇಶ್, ಸೇರಿದಂತೆ ಮತ್ತಿತರರು ಇದ್ದರು.

























Discussion about this post