ಚಿಕ್ಕಮಗಳೂರು: ತಾಲ್ಲೂಕಿನ ಲಕ್ಯ ಮಾದರಸನ ಕೆರೆ ಮತ್ತು ದಾಸರಳ್ಳಿ ಕೆರೆಗೆ ಹಿರೇಮಗಳೂರು ಕೆರೆಯಿಂದ ನೀರು ತುಂಬಿಸುವ ಏತ ನೀರಾವರಿ ಕಾಮಗಾರಿಗಳು ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ತಿಳಿಸಿದರು.
ನಗರದಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ನಂತರ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿ ಎರಡೂ ಏತ ನೀರಾವರಿ ಕಾಮಗಾರಿ ಯಾವುದೇ ಸಮಸ್ಯೆ ಇಲ್ಲದಂತೆ ನಡೆಯುತ್ತಿದೆ. ಕೊಂಚ ಭೂಸ್ವಾಧೀನ ಸಮಸ್ಯೆ ಇದೆ ಅದನ್ನು ಸರಿಪಡಿಸುತ್ತೇವೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ ಎಂದರು.
ಬೆಳವಾಡಿ ಕೆರೆ ಸೇರಿದಂತೆ ಒಟ್ಟು ಮೂರು ಕೆರೆಗಳಿಗೆ ನೀರು ತುಂಬಿಸುವ ಕರಗಡ ಯೋಜನೆ ಈಗಾಗಲೇ ಕಾರ್ಯಾರಂಭವಾಗಿದೆ. ಹಂತ ೧ ಮತ್ತು ಎರಡು ಎಂದು ವಿಂಗಡಿಸಲಾಗಿದೆ. ಮುಂದೆ ನಾಲೆ ಕುಸಿದರೆ ಪೈಪ್ಲೈನ್ ಮಾಡುವ ಸಲುವಾಗಿ ಹಣ ಮೀಸಲಿಡಲಾಗಿದೆ ಎಂದರು.
ಈಗಾಗಲೇ ಕರಗಡ ಕಾಲುವೆ ಮೂಲಕ ನೀರನ್ನು ಹರಿಸಲಾಗಿತ್ತು. ಆದರೆ ಕಾಲುವೆಯ ಮಣ್ಣು ಕುಸಿಯುವ ಜೊತೆಗೆ ಗುರುತ್ವಾಕರ್ಷಣೆಯಲ್ಲಿ ನೀರು ಹರಿಯದ ಕಾರಣ ಕಾಲುವೆಯ ಅರ್ಧದಷ್ಟು ಪೈಪ್ಲೈನ್ ಅಳವಡಿಸಿ ನೀರನ್ನು ಪಂಪ್ ಮಾಡಲಾಗುತ್ತಿದೆ. ಉಳಿದ ಮೂರ್ನಾಲ್ಕು ಕಿ.ಮೀ.ಗಳ ದೂರ ಗುರುತ್ವಾಕರ್ಷಣೆಯಲ್ಲಿ ನೀರು ಹರಿಯಲು ಯಾವುದೇ ಸಮಸ್ಯೆ ಇಲ್ಲವಾದರೆ ಸರಿ, ಒಂದೊಮ್ಮೆ ಅಲ್ಲಿಯೂ ಮಣ್ಣು ಕುಸಿದು ಮತ್ತೆ ತೊಂದರೆ ಎದುರಾದಲ್ಲಿ ಪೈಪ್ಲೈನ್ ವಿಸ್ತರಿಸಲಾಗುವುದು ಅದಕ್ಕಾಗಿ ಹಣ ಮೀಸಲಿಡಲಾಗಿದೆ ಎಂದರು.
ಕರಗಡ ಸಂಬಂಧ ನಮ್ಮ ಯೋಜನೆಯಲ್ಲಿ ಒಟ್ಟು ೯ ಕೋಟಿ ಹಣ ಇತ್ತು ಅದರಲ್ಲಿ ೩ ಕೋಟಿ ಮಾತ್ರ ಖರ್ಚು ಮಾಡಿ ಪೈಪ್ಲೈನ್ ಹಾಕುವ ಕೆಲಸ ಮುಗಿಸಿದ್ದೇವೆ. ಈ ಒಂದು ಋತುವಿನ ಅಂದರೆ ಆರೇಳು ತಿಂಗಳು ನೀರನ್ನು ಪೈಪ್ಲೈನ್ ಮೂಲಕ ಹರಿಸಿ ನಾಲೆಯ ದಡ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವದನ್ನು ಗಮನಿಸುತ್ತೇವೆ. ಏನೂ ತೊಂದರೆ ಆಗಲಿಲ್ಲವಾದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ತೊಂದರೆ ಆದಲ್ಲಿ ಪೈಪ್ಲೈನ್ ಮುಂದುವರಿಸಿ ಮಣ್ಣು ಮುಚ್ಚಲಾಗುವುದು ಎಂದರು.
ಕರಗಡ ಯೋಜನೆ ಮೂಲ ಕಾಮಗಾರಿ ಅವೈಜ್ಞಾನಿಕವಾಗಿ ಆಗಿತ್ತು. ನಾಲೆಯಲ್ಲಿ ಸರಿಯಾಗಿ ನೀರು ಹರಿಯಲಿಲ್ಲ. ರೈತರಿಗೆ ಅನುಕೂಲವಾಗಿಲಿಲ್ಲ ಎನ್ನುವ ಕಾರಣಕ್ಕೆ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ. ಶಾಸಕರು ಶಾಸಕರು ಸಹ ಕಾಳಜಿ ತೋರಿದ ಪರಿಣಾಮ ನಾವು ಇದನ್ನು ಆಧ್ಯತೆಯಾಗಿ ತೆಗೆದುಕೊಂಡು ಪೈಪ್ಮೂಲಕ ನೀರು ಹರಿಯುವಂತೆ ಮಾಡಿದ್ದೇವೆ. ಬೆಳವಾಡಿ ವರೆಗೆ ನೀರು ಹರಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಗುರುತ್ವಾಕರ್ಷಣೆಯಲ್ಲಿ ಹೋಗಿದ್ದರೆ ನೀರು ಜಾಸ್ತಿ ಹೋಗುತ್ತಿತ್ತು ಎಂದು ಪ್ರತಿಭಟನೆ ಮಾಡುತ್ತಿರುವವರ ಭಾವನೆ ಇರಬಹುದು ಆದರೆ ನಾವು ಈಗ ಪಂಪ್ ಮಾಡುವ ಮೂಲಕ ಯೋಜನೆಯಲ್ಲಿ ಹಂಚಿಕೆಯಾಗಿರುವ ಮೂರು ಪಟ್ಟು ನೀರನ್ನು ಹರಿಸುತ್ತಿದ್ದೇವೆ ಎಂದರು.
ನೀರಾವರಿ ಇಲಾಖೆಯಲ್ಲಿ ಹಣ ಪೋಲಾಗುತ್ತಿದೆ ಕಾಮಗಾರಿಗಳು ತೃಪ್ತಿಕರವಾಗಿ ಆಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಸದನದಲ್ಲಿ ಕೇಳಿದ್ದರು. ಅಧಿವೇಶನ ಮುಗಿದ ಕೂಡಲೇ ನಾನೇ ಬಂದು ನೋಡುತ್ತೇನೆ ಎಂದು ಹೇಳಿದ್ದೆ. ಅದರ ಪ್ರಕಾರ ಭೇಟಿ ನೀಡಿದ್ದೇನೆ ಅವರು ಉಲ್ಲೇಖಿಸಿರುವ ಒಂದೆರಡು ಯೋಜನೆಗಳಿಗೆ ಸಂಬಂಧಿಸಿದ ಕೆರೆಗಳಿಗೆ ಭೇಟಿ ಮಾಡಿ ಪರಿಶೀಲಿಸುತ್ತೇನೆ ಎಂದರು.

























Discussion about this post