ಚಿಕ್ಕಮಗಳೂರು: ಯುವಜನರು ಮಾನಸಿಕ ಖಿನ್ನತೆಯನ್ನು ದೂರ ಮಾಡಿ ಒತ್ತಡ ಮುಕ್ತ ಜೀವನ ನಡೆಸಬೇಕು, ವಾಸ್ತವವನ್ನು ಅರಿಯುವ ಮನೋಭಾವ ಬೆಳೆಸಿಕೊಂಡರೆ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕಿದೆ ಎಂದು ಜಿಲ್ಲಾ ಮಾನಸಿಕ ರೋಗ ತಜ್ಞ ಡಾ. ವಿನಯ್‌ಕುಮಾರ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ಎಸ್.ಟಿ.ಜೆ ಮಹಿಳಾ ಪದವಿ ಪೂರ್ವ ಕಾಲೇಜು ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ’ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’ ಪ್ರಯುಕ್ತ ಜಾಗೃತಿ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಆತ್ಮಹತ್ಯೆ ಎಂಬುದು ಮಹಾಪಾಪ, ಒಂದು ನಿಮಿಷ ಯೋಚಿಸಿ ಜೀವನವನ್ನು ಬದಲಾಯಿಸಿ ಒಂಟಿತನ ನಿವಾರಿಸಿ, ಮಾನಸಿಕ ರೋಗ ತಡೆಗಟ್ಟಿ, ಆತ್ಮಹತ್ಯೆ ಎಂಬುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಆತ್ಮಹತ್ಯೆ ತಡೆಗಟ್ಟಲು ಎಲ್ಲರೂ ಒಗ್ಗೂಡೋಣ ಎಂದು ಯುವಜನತೆಗೆ ಕರೆ ನೀಡಿದರು.
ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಸೆ.೧೦ರಂದು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಅಸೋಸಿಯೇಶನ್ ಫಾರ್ ಸುಸೈಡ್ ಪ್ರಿವೆನ್ಷನ್ (ಐಎಎಸ್ಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಸೆಪ್ಟೆಂಬರ್ ೧೦, ೨೦೦೩ ರಂದು ಈ ದಿನವನ್ನು ಜಾರಿಗೆ ತಂದವು. ಮೊದಲ ಬಾರಿ ವಿಶ್ವ ಆತ್ಮಹತ್ಯೆ ವರದಿಯನ್ನು ೨೦೧೪ ರಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿತು ಎಂದು ತಿಳಿಸಿದರು.
ಪ್ರತಿವರ್ಷ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಸಾಗುತ್ತಿವೆ. ಆದರೆ ಸೆಲೆಬ್ರಟಿಗಳು ಆತ್ಮಹತ್ಯೆ ಮಾಡಿಕೊಂಡಾಗ ಹೆಚ್ಚು ಚರ್ಚೆಗೆ ಬರುತ್ತವೆ. ಆತ್ಮಹತ್ಯೆ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಕೆಲಸದ ಒತ್ತಡ, ಖಿನ್ನತೆ, ಕುಟುಂಬದಿಂದ ದೂರದಲ್ಲಿರುವುದು, ಒಂಟಿತನ, ಆರೋಗ್ಯದ ಕಡೆ ಗಮನ ಕೊಡದಿರುವುದು ಹಣಕಾಸು ಮತ್ತು ಕೆಲಸದ ಹೊರೆ, ಸೇರಿದಂತೆ ಮತ್ತಿತರ ಕಾರಣದಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಇದು ನಿಜಕ್ಕೂ ದುರಂತ ಈ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ ಎಂದರು.
ಕಳಸಾಪುರ ವೈದ್ಯಾಧಿಕಾರಿ ಡಾ. ಕಾರ್ತಿಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಎನ್ನುವುದೇ ಪರಿಹಾರವಲ್ಲ ಮನುಷ್ಯ ಹುಟ್ಟುವಾಗಲೂ ಹೋರಾಟ ನಡೆಸಿರುತ್ತಾನೆ. ಅಂತಹದರಲ್ಲಿ ಜೀವನದ ಸಮಸ್ಯೆಗಳು ಎಂದಿಗೂ ದೊಡ್ಡದಲ್ಲ. ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಆದರೆ ಕೋಪ, ಖಿನ್ನತೆಯಲ್ಲಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಸಮಸ್ಯೆಗಳನ್ನು ಶಾಂತಚಿತ್ತದಿಂದ ಅಥವಾ ಆಪ್ತ ಸಮಾಲೋಚನೆ ಮೂಲಕ ಪರಿಹರಿಸಿಕೊಂಡಲ್ಲಿ ಅದು ಸಮಸ್ಯೆಯೇ ಅಲ್ಲ ಎನ್ನಿಸಬಹುದು ಎಂದು ಸಲಹೆ ನೀಡಿದರು.
ದೇಶದಲ್ಲಿ ೨೦೧೫ರಿಂದ ೨೦೧೯ರ ೫ ವರ್ಷಗಳ ತುಲನಾತ್ಮಕ ವರದಿ ಪ್ರಕಾರ ಪ್ರತಿವರ್ಷ ೧.೩೩ ಲಕ್ಷ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ ತಿಳಿಸಿದೆ. ೨೦೧೯ರಲ್ಲಿ ದೇಶದಲ್ಲಿ ೧.೩೬ ಲಕ್ಷ ಜನ ನಾನಾ ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡ ಶ್ರೀಮಂತರೇ ಒಂಟಿತನ, ಮಾನಸಿಕ ಖಿನ್ನತೆ, ಹಣಕಾಸು, ಕುಟುಂಬ ಕಲಹ ಮತ್ತಿತ್ತರ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುವಜನತೆ ಒಟ್ಟುಗೂಡಬೇಕಿದೆ ಎಂದು ಹೇಳಿದರು.
ಒಬ್ಬ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆ, ಸಾವಿನ ಕುರಿತು ಮಾತಾಡುತ್ತಿದ್ದಾನೆಂದರೆ ಅವರನ್ನು ಒಂದೆರಡು ಗಂಟೆ, ಒಂದೆರಡು ದಿನಗಳ ಮಟ್ಟಿಗೆ ನಮ್ಮ ಆಪ್ತ ಪರಿಧಿಯೊಳಗೆ ಇಟ್ಟುಕೊಳ್ಳುವುದು. ಖಿನ್ನತೆಯಲ್ಲಿರುವವರಿಗೆ ಆಪ್ತ ಸಮಾಲೋಚನೆ ಕೊಡಿಸಲು ಪ್ರಯತ್ನಿಸುವುದು. ಅತಿಯಾಗಿ ಒಂಟಿತನ ಬಯಸುವವರ ಮೇಲೆ ನಿಗಾ ಇಡುವುದು. ಇನ್ನೊಬ್ಬರ ಸಮಸ್ಯೆಗೆ, ನೋವಿಗೆ ಕಿವಿಯಾಗುವ ಕನಿಷ್ಠ ಹೃದಯವಂತಿಕೆ ತೋರಿಸೋದು ಸಮಸ್ಯೆ ತಿಳಿದು, ಸರಿಯಾದ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದರು.
ಎಸ್.ಟಿ.ಜೆ ಕಾಲೇಜು ಪ್ರಾಂಶುಪಾಲರಾದ ಜೆ.ಕೆ. ಭಾರತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಈ ವರ್ಷ ವಿಶ್ವ ಆತ್ಮಹತ್ಯೆ ತಡೆ ದಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಮಾನಸಿಕ ಖಿನ್ನತೆಯನ್ನು ತಪ್ಪಿಸಲು, ನಿಯಂತ್ರಿಸಲು ಈ ಪರಿಸ್ಥಿತಿ ಮತ್ತೊಮ್ಮೆ ಜಾಗತಿಕವಾಗಿ, ರಾಷ್ಟ್ರೀಯವಾಗಿ ಮತ್ತು ಸ್ಥಳೀಯ ಮಟ್ಟದಲ್ಲೂ ಜಾಗೃತಿ ಮೂಡಿಸುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಒತ್ತಿ ಹೇಳುತ್ತದೆ ಎಂದರು.
ಬದುಕಿನಲ್ಲಿ ಎಲ್ಲಾ ಸುಖಬೋಗಳನ್ನೂ ಹೊಂದಿದ್ದವರು ಶ್ರೀಮಂತರೂ ಅದರಲ್ಲೂ ಸಿನಿಮಾ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಓಡುತ್ತಿರುವ ಈ ಜಗತ್ತಿನಲ್ಲಿ ಯಾರಿಗೂ ಸಮಯವೇ ಇಲ್ಲ ಎಂಬ ಮಾತಿದೆ. ಬಯಸಿದ್ದು ಸಿಗದಿರುವುದು, ಅವಮಾನ ಸಹಿಸಿಕೊಳ್ಳದಿರುವುದು, ಕೆಲಸದ ಒತ್ತಡ, ಖಿನ್ನತೆ, ಹೀಗೆ ಹಲವು ಸಮಸ್ಯೆಗಳ ಆಗರವನ್ನೇ ಮನುಷ್ಯ ತಾನಾಗಿಯೇ ಕಟ್ಟಿಕೊಂಡಿದ್ದಾನೆ ಇವುಗಳಿಂದ ಹೊರ ಬರಲಾಗದೇ ಆತ್ಮಹತ್ಯೆಗೆ ಶರಣಾಗುತ್ತಾನೆ ಇದಕ್ಕೆ ಮಾನಸಿಕವಾಗಿ ಸಮಾಲೋಚನೆ ಅಗತ್ಯವಿದ್ದು, ಸಕರಾತ್ಮಕ ಚಿಂತನೆಗಳಿಗೆ ಹೆಚ್ಚು ಮಹತ್ವ ನೀಡಬೇಕು, ಉತ್ತಮ ಹವ್ಯಾಸಗಳನ್ನು, ಸೃಜನಾತ್ಮಕ ಚಟುವಟಿಕೆಗಳನ್ನು ಆದ್ಯತೆ ನೀಡಬೇಕು ಇದರಿಂದ ಮನಸ್ಸು ಬೇರೆಡೆಗೆ ಹರಿಯುತ್ತದೆ. ಆತ್ಮಹತ್ಯೆ ಬಗ್ಗೆ ತಿಳಿದಷ್ಟು ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಂ.ಆರ್ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ನಾವು ತೆಗೆದುಕೊಳ್ಳುವ ದುಡುಕು ನಿರ್ಧಾರದಿಂದಾಗಿ ಆತ್ಮಹತ್ಯೆಯಂತಹ ಘಟನೆಗಳು ಹೆಚ್ಚಾಗುತ್ತಿವೆ. ದುಡುಕಿನ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಕೆಲವು ಸಮಸ್ಯೆಗಳಿರುತ್ತವೆ. ಅವುಗಳಿಗೆ ಪರಿಹಾರ ಸಿಕ್ಕರೆ ಆತ್ಮಹತ್ಯೆಯಿಂದ ಪಾರಾಗುತ್ತಾರೆ. ಅಂತವರಿಗೆ ಮನೋವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಆತ್ಮಹತ್ಯೆಗೆ ಆರ್ಥಿಕ ತೊಂದರೆ, ಸಾಂಸಾರಿಕ ತೊಂದರೆ, ವ್ಯವಹಾರದಲ್ಲಿ ನಷ್ಟ, ಆತ್ಮೀಯರ ಅಗಲಿಕೆ, ಮಾದಕ ವ್ಯಸನ ಹೀಗೆ ಹಲವು ಅಂಶಗಳು ಕಾರಣವಾಗಿರಬಹುದು ಎಂದರು.ಈ ಸಂದರ್ಭದಲ್ಲಿ ಚಿಕಿತ್ಸಾ ಮನಶಾಸ್ತ್ರಜ್ಞ ನವೀನ್‌ಕುಮಾರ್, ಮನೋ ಸಾಮಾಜಿಕ ಕಾರ್ಯಕರ್ತ ಜಯಣ್ಣ, ಶುಶ್ರೂಶಕಿ ಉಷಾ, ಹರ್ಷ ಮತ್ತಿತರರು ಇದ್ದರು.

























Discussion about this post