ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕು ಮೇಗುಂದಾ ಹೋಬಳಿ ವ್ಯಾಪ್ತಿಯಲ್ಲಿರುವ ಕಲ್ಲುಗುಡ್ಡೆ ಗ್ರಾಮದ ೭೩೬ ಎಕರೆ ಕಂದಾಯ ಭೂಮಿಯನ್ನು ಸೆಕ್ಷನ್ ೪(೧) ಅಡಿಯಲ್ಲಿ ಮೀಸಲು ಅರಣ್ಯ ಎಂದು ಉದ್ಘೋಷ ಹೊರಡಿಸಲು ಮುಂದಾಗಿದೆ. ಪರಿಣಾಮ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ವಾಸವಿರುವ ಮುನ್ನೂರಕ್ಕೂ ಹೆಚ್ಚು ಕುಟುಂಬಗಳ ಮೂರು ಸಾವಿರ ಕುಟುಂಬಗಳು ಬೀದಿಪಾಲಾಗುವ ಆತಂಕದಲ್ಲಿದ್ದಾರೆ. ಸರಕಾರ ಈ ಯೋಜನೆಯನ್ನು ಕೈಬಿಡದಿದ್ದಲ್ಲಿ ಮುಂದಿನ ತಾಪಂ, ಜಿಪಂ ಚುನಾವಣೆಯನ್ನು ಬಹಿಷ್ಕರಿಸಲು ಸಂತ್ರಸ್ಥರು ತೀರ್ಮಾನಕೈಗೊಂಡಿದ್ದಾರೆ ಎಂದು ಜನಶಕ್ತಿ ಸಂಘಟನೆಯ ಸಂಚಾಲಕ ಕೌಳಿ ರಾಮು ತಿಳಿಸಿದ್ದಾರೆ.
ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದಲ್ಲಿರುವ ಮುನ್ನೂರಕ್ಕೂ ಹೆಚ್ಚು ಕುಟುಂಬಗಳ ಪೈಕಿ ಬಹುತೇಕು ಕುಟುಂಬಗಳು ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಇಲ್ಲಿನ ೭೩೬ ಎಕರೆ ಕಂದಾಯ ಭೂಮಿಯ ವಿವಿಧೆಡೆ ನಿವಾಸಿಗಳು ನಿವೇಶನ, ಮನೆ, ಕೃಷಿ ಜಮೀನುಗಳನ್ನು ಹೊಂದಿದ್ದಾರೆ. ನಿವೇಶನ, ಕೃಷಿ ಜಮೀನುಗಳು ಮಂಜೂರಾತಿಗಾಗಿ ಗ್ರಾಮಸ್ಥರು ೯೪ಸಿ, ಫಾರಂ ನಂ.೫೩ ಅಡಿಯಲ್ಲಿ ನಿವೇಶನ, ಕೃಷಿ ಜಮೀನು ಮಂಜೂರಾತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದು, ಇದುವರೆಗೂ ಜಮೀನುಗಳಿಗೆ ಹಕ್ಕುಪತ್ರ ಸಿಕ್ಕಿರುವುದಿಲ್ಲ. ಇದರ ಪರಿಣಾಮ ಇಲ್ಲಿನ ಜನರಿಗೆ ನಾಗರಿಕ ಸೌಲಭ್ಯಗಳು ಮರೀಚಿಕೆಯಾಗಿವೆ. ಈ ಮಧ್ಯೆ ಕಲ್ಲುಗುಡ್ಡೆ ಗ್ರಾಮದ ೭೩೬ ಎಕರೆ ಕಂದಾಯ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡುವ ಉದ್ದೇಶದಿಂದ ಅರಣ್ಯ ಇಲಾಖೆ ಕಳೆದ ಜು.೨೮ರಂದು ೪(೧) ನೋಟಿಫಿಕೇಶನ್ ಹೊರಡಿಸಿದ್ದು, ಇದರಿಂದಾಗಿ ಗ್ರಾಮದ ಜನರು ದಿಕ್ಕು ತೋಚದಂತಾಗಿದ್ದಾರೆ ಎಂದರು.
ಈಗಾಗಲೇ ಮಲೆನಾಡು ಭಾಗದ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಜನರು ಹುಲಿಯೋಜನೆ, ಕಸ್ತೂರಿರಂಗನ್ ವರದಿ, ಕುದುರೆಮುಖ ರಾ.ಉದ್ಯಾನವನ ಮತ್ತಿತರ ಅರಣ್ಯ ಯೋಜನೆಗಳಿಂದಾಗಿ ಇಲ್ಲಿನ ಜನರು ಬದುಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಯೋಜನೆಗಳ ತೂಗುಕತ್ತಿ ಇನ್ನೂ ಜೀವಂತವಾಗಿದೆ. ಇದರ ಮಧ್ಯೆ ಸದ್ಯ ೪(೧) ನೋಟಿಫಿಕೇಶನ್ ಈ ಭಾಗದ ಬಡ ಜನರನ್ನು ಮತ್ತಷ್ಟು ಆತಂಕ್ಕೆ ದೂಡಿದೆ ಎಂದ ಅವರು, ಕಲ್ಲುಗುಡ್ಡೆ ೪(೧) ನೋಟಿಫಿಕೇಶನ್ ಸಂಬಂಧ ಇತ್ತೀಚೆಗೆ ಗ್ರಾಮದಲ್ಲಿ ಸಭೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂಬಂಧ ಎಫ್ಎಸ್ಒ ಅಧಿಕಾರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಆದರೆ ಎಫ್ಎಸ್ಒ ಅಧಿಕಾರಿಯ ಕಚೇರಿ ಕಡೂರಿನಲ್ಲಿದ್ದು, ಮಲೆನಾಡಿನ ಕುಗ್ರಾಮಗಳಿಂದ ಕಡೂರು ಪಟ್ಟಣಕ್ಕೆ ಹೋಗಿ ಬರಲು ಬಡ ಕೂಲಿ ಕಾರ್ಮಿಕರು, ಸಣ್ಣ ಕೃಷಿಕರು ಸಾಧ್ಯವಾಗುತ್ತಿಲ್ಲ. ಆಕ್ಷೇಪಣೆಗಳನ್ನು ಸಲ್ಲಿಸಲು ನಿವಾಸಿಗಳಿಗೆ ಸರಕಾರದ ವತಿಯಿಂದ ಮತದಾನದ ಗುರುತಿನ ಚೀಟಿ, ಪಡಿತರ ಚೀಟಿ ಹೊರತು ಪಡಿಸಿ ಮನೆ, ನಿವೇಶನ, ಕೃಷಿ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಫ್ಎಸ್ಇ ಅಧಿಕಾರಿಯಿಂದ ಬಡವರು, ಕೃಷಿಕರಿಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ. ಆದ್ದರಿಂದ ರಾಜ್ಯ ಸರಕಾರ ೪(೧) ನೋಟಿಫಿಕೇಶನ್ ಹೊರಡಿಸಿರುವುದನ್ನು ರದ್ದು ಪಡಿಸಿ ಮೀಸಲು ಅರಣ್ಯ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
೪(೧) ನೋಟಿಫಿಕೇಶನ್ ಸಂಬಂಧ ಸ್ಥಳೀಯ ಕಾಂಗ್ರೆಸ್, ಬಿಜೆಪಿ ಜನಪ್ರತನಿಧಿಗಳು ಪರಸ್ಪರ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆಯೇ ಹೊರತು ಬಡಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಕೌಳಿ ರಾಮು, ಗ್ರಾಮಸ್ಥರ ಆತಂಕವನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರಕಾರ ಅಗತ್ಯ ಕ್ರಮವಹಿಸಬೇಕು. ತಪ್ಪಿದಲ್ಲಿ ಮುಂಬರುವ ತಾಪಂ, ಜಿಪಂ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲ್ಲುಗುಡ್ಡೆ ಮೀಸಲು ಅರಣ್ಯ ವಿರೋಧಿ ಹೋರಾಟ ಸಮಿತಿ ಮುಖಂಡರಾದ ಕಿಟ್ಟಯ್ಯ, ಶಿವಶಂಕರ್, ಸುಧಾಕರ್, ರಾಘವೇಂದ್ರ, ರಮೇಶ್, ಪ್ರವೀಣ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

























Discussion about this post