ಚಿಕ್ಕಮಗಳೂರು : ಕೇಂದ್ರ ಸರ್ಕಾರ ರೈತವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಕ್ರೂರತನದ ಆಡಳಿತ ನಡೆಸುತ್ತಿದೆ ಎಂದು ಸಿಪಿಎಂ ಪಕ್ಷದ ಮುಖಂಡ ಹಾಗೂ ಹೋರಾಟಗಾರ ಡಾ. ಕೆ.ಪ್ರಕಾಶ್ ಆಕ್ರೋಶ ಹೊರಹಾಕಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಗಳ ಕುರಿತ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ರೈತರಿಗೆ ಮಾರಕವಾಗಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿ ರೈತ ಹಾಗೂ ಪ್ರಜಾಪ್ರಭುತ್ವ ವಿರೋಧಿ ಆಡಳಿತ ನಡೆಸುತ್ತಿದೆ. ಜನಮನ್ನಣೆ ಇಲ್ಲದ ಕಾಯ್ದೆಗಳನ್ನು ದಬ್ಬಾಳಿಕೆ ಮೂಲಕ ಜಾರಿಗೊಳಿಸಲು ಮುಂದಾಗಿದೆ. ಮಾರಕ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗದಲ್ಲಿ ರೈತರು ನಿರಂತರ ಹೋರಾಟ ಕೈಗೊಂಡು ಈಗಾಗಲೇ ೬೦೦ ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ರೈತರಿಗೆ ಬೇಡವಾದ ಕಾಯ್ದೆಗಳು ಸರ್ಕಾರಕ್ಕೆ ಏಕೆ ಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದಿನ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪ್ರಜೆಗಳ ಹೋರಾಟ, ಸ್ವಾತಂತ್ರ್ಯ ಮಾತಿಗೆ ಮನ್ನಣೆ ಇಲ್ಲದಂತಾಂಗಿದೆ. ಕಾಯ್ದೆಗಳನ್ನು ಜಾರಿಗೆ ತರದಂತೆ ರೈತರು ನಿರಂತರ ಧರಣಿ ಕೈಗೊಂಡರು ಕೇಂದ್ರ ಸರ್ಕಾರ ಯಾರ ಹಿತಕ್ಕಾಗಿ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಬಂಡವಾಳಶಾಹಿ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಸರ್ಕಾರ ಆಡಳಿತ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಮನಕೀ ಬಾತ್ ಎನ್ನುವ ಪ್ರಧಾನಿಗಳು ರೈತರ ಸಮಸ್ಯೆಗಳು, ಮಾರಕ ಕಾಯ್ದೆಗಳ ಕುರಿತು ಚರ್ಚಿಸಲಿ, ಇಂದಿನ ಆಡಳಿತ ವ್ಯವಸ್ಥೆಯ ಬಗ್ಗೆ ರೈತರು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಲು ಮುಂದಾದಲ್ಲಿ ಅವರನ್ನು ಶತ್ರುಗಳಂತೆ ಕಾಣಲಾಗುತ್ತಿದೆ. ಬ್ರಿಟೀಷರ ಕಾಲದ ಕ್ರೂರತೆ ಇಂದಿನ ಆಡಳಿತ ವ್ಯವಸ್ಥೆಯಲ್ಲಿದೆ ಎಂದು ಅಸಮಧಾನ ಹೊರಹಾಕಿದರು.
ದೆಹಲಿ, ಪಂಜಾಬ್ ಸೇರಿದಂತೆ ವಿವಿಧ ಭಾಗದ ರೈತರು ಮನೆ-ಮಠ ತ್ಯಾಗ ಮಾಡಿ ದೆಹಲಿ ಗಡಿಯಲ್ಲಿ ನಿರಂತರ ಹೋರಾಟ ಕೈಗೊಂಡಿದ್ದು ಇದಕ್ಕೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲಿಸಿದ್ದು ಇದೊಂದು ಐತಿಹಾಸಿಕ ಚಳುವಳಿಯಾಗಿದೆ. ಬಿಜೆಪಿ ಸರ್ಕಾರವು ಆರ್.ಎಸ್.ಎಸ್.ಸಿದ್ದಾಂತಗಳ ಮೇಲೆ ಸಂವಿಧಾನಾತ್ಮಕ ವಿರುದ್ದವಾಗಿ ಮಹಿಳಾ, ಕಾರ್ಮಿಕರ, ರೈತರ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಸ್ವಾತಂತ್ರ್ಯ ಪಡೆದ ಬಳಿಕ ರೈತ ವಿರೋಧಿ ಕಾಯ್ದೆಗಳನ್ನು ಖಂಡಿಸಿ ದೇಶದ ಇತಿಹಾಸದಲ್ಲಿ ನಡೆಯುತ್ತಿರುವ ಬೃಹತ್ ರೈತ ಚಳುವಳಿ ಇದಾಗಿದೆ. ರಾಜ್ಯಗಳು ಶಾಸನಾತ್ಮಕವಾಗಿ ಜಾರಿಗೊಳಿಸಬೇಕಾದ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಮೂಲಕ ಸುಗ್ರೀವಾಜ್ಞೆ ಜಾರಿ ಮಾಡಿ ಕಾಯ್ದೆಗಳನ್ನು ಜಾರಿ ಮಾಡಲು ಮುಂದಾಗಿದೆ ಎಂದು ದೂಷಿಸಿದರು.
ರೈತ ವಿರೋಧಿ ಕಾಯ್ದೆಗಳು ಜಾರಿಗೆ ಬಂದಲ್ಲಿ ರೈತರು ಬಂಡವಾಳ ಶಾಹಿಗಳ ಅಡಿಯಾಳಾಗಿ ಬದುಕಬೇಕಾಗುತ್ತದೆ. ಎಂಪಿಎಂಸಿಯನ್ನು ದುರ್ಬಲಗೊಳಿಸಿ ಕಾರ್ಪೋರೇಟ್ ಕಂಪನಿದಾರರನ್ನು ಉದ್ದಾರ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾಯ್ದೆಗೆ ತಿದ್ದುಪಡಿ ರೂಪಿಸಿದೆ. ಖಾಸಗೀಕರಣವನ್ನು ಉತ್ತೇಜಿಸುವ ಮೂಲಕ ಶಾಸನಗಳನ್ನು ತಿದ್ದುಪಡಿಯೊಂದಿಗೆ ಕಾಯ್ದೆ ರೂಪಿಸಲು ಮುಂದಾಗಿದ್ದು ಈ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಲಿದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಪಿಎಸ್‌ಓ ಜಿಲ್ಲಾಧ್ಯಕ್ಷ ಡಿ.ಎ.ಶ್ರೀನಿವಾಸ್ ಮಾತನಾಡಿ ದೇಶದಲ್ಲಿ ಕೋವಿಡ್ ಸಂಕಷ್ಟದ ಜೊತೆಗೆ ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಸರ್ಕಾರ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಇದರ ಬಗ್ಗೆ ಜನತೆ ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಸಿಪಿಐ ಮುಖಂಡ ಅಮ್ಜದ್ ಮಾತನಾಡಿ ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಿರಂತರವಾಗಿ ಧರಣಿ ಕೈಗೊಂಡಿದ್ದಾರೆ. ರೈತರ ಕಾಳಜಿ ಇದ್ದಲ್ಲಿ ಸರ್ಕಾರ ಕೂಡಲೇ ಕಾಯ್ದೆಗಳನ್ನು ಹಿಂಪಡೆಯಬೇಕು, ಸರ್ವಾಧಿಕಾರಿ ಆಡಳಿತ ಬಿಟ್ಟು ಪ್ರಜೆಗಳಿಗೆ, ರೈತರಿಗೆ, ಕಾರ್ಮಿಕರಿಗೆ ಪೂರಕವಾಗಿ ಕಾಯ್ದೆಗಳನ್ನು ರೂಪಿಸಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಪಿಎಸ್‌ಓ ಉಪಾಧ್ಯಕ್ಷ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಉಮೇಶ್‌ಕುಮಾರ್, ಸಹ ಕಾರ್ಯದರ್ಶಿಗಳಾದ ಸುರೇಶ್, ಅಂಗಡಿ ಚಂದ್ರು, ಕಲಾಮಂಡಳಿಯ ಕೆ.ಎನ್.ಉದ್ದಪ್ಪ, ಐ.ಎಂ.ಪೂಣೇಶ್, ರವೀಶ್ ಕ್ಯಾತನಬೀಡು, ಗುರುಶಾಂತಪ್ಪ, ಲಕ್ಷ್ಮಣ ಹುಣಸೇಮಕ್ಕಿ, ಚಂದ್ರಪ್ಪ, ಯು.ಡಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

























Discussion about this post