ಚಿಕ್ಕಮಗಳೂರು : ಕುಶಲಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳ ಮೂಲ ಕಾರಣಕರ್ತರಾದ ವಿಶ್ವಕರ್ಮರ ಕೊಡುಗೆ ಅಪಾರವಾದುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸ್ಮರಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಸೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸರಳ ಕಾರ್ಯಕ್ರಮದಲ್ಲಿ ಭಗವಾನ್ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಬ ನಮನ ಸಲ್ಲಿಸಿ ಮಾತನಾಡಿದರು.
ಬುದ್ದಿವಂತಿಕೆ, ದೂರದೃಷ್ಟಿ, ಕೌಶಲಗಳನ್ನು ಹೊಂದಿರುವ ವಿಶ್ವಕರ್ಮ ಸಮಾಜದವರು ಹುಟ್ಟು ತಂತ್ರಜ್ಞರಾಗಿದ್ದಾರೆ. ವೇದಗಳ ಕಾಲದಲ್ಲಿಯೇ ಕುಶಲ ಕಲೆ, ವಾಸ್ತುಶಿಲ್ಪ, ತಂತ್ರಜ್ಞಾನದ ಮೂಲಕ ಸಮಾಜವು ತನ್ನನ್ನು ಗುರುತಿಸಿಕೊಂಡಿದೆ ಇದಕ್ಕೆ ಮೂಲ ಕಾರಣಕರ್ತರು ವಿಶ್ವಕರ್ಮರು ಎಂದು ಬಣ್ಣಿಸಿದರು.
ಕೋವಿಡ್ ಹಿನ್ನಲೆಯಲ್ಲಿ ಸರಳ ಆಚರಣೆ ಮಾಡಲಾಗಿದ್ದು, ಈ ದಿನದ ಆಚರಣೆ ಮೂಲಕ ವೃತ್ತಿಪರರನ್ನು ಸ್ಮರಿಸುವ ದಿನವಾಗಿದೆ. ನಿರಂತರ ಸಾಮಾಜಿಕ ಸೇವೆಯಲ್ಲಿ ನಿರತರಾದ ಈ ಸಮುದಾಯದವರು ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲ ರಂಗದಲ್ಲಿಯೂ ಸಬಲರಾಗಬೇಕು, ವಿಶ್ವಕರ್ಮರ ಕಾಯಕ ನಿಷ್ಟೆ, ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂದು ಆಶಿಸಿದರು.
ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷ ಮಹೇಶ್ ಮಾತನಾಡಿ ವಿಶ್ವಕರ್ಮ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ವಿಶ್ವಕರ್ಮ ಅಭಿವೃದ್ಧಿ ಮಂಡಳಿ ನಿಗಮ ಸ್ಥಾಪಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಯಾವುದೇ ಅನುದಾನಗಳು ಬಿಡುಗಡೆಯಾಗದೆ ಸಮಾಜ ಸಂಕಷ್ಟದಲ್ಲಿದೆ ಎಂದರು.
ಸಮಾಜದ ಏಳಿಗೆಗೆ ಪ್ರತಿಯೊಬ್ಬರು ಸಂಘಟಿತರಾಗಬೇಕು, ವಿಶ್ವಕರ್ಮರ ಕಾಯಕ ನಿಷ್ಠೆ, ಆದರ್ಶಗಳ ಪರಿಪಾಲನೆಯಾಗಬೇಕು.ವಿಶ್ವಕರ್ಮರ ಆದರ್ಶವನ್ನು ಅಳವಡಿಸಿಕೊಂಡು, ಮಾನವೀಯ ಮೌಲ್ಯಗಳೊಂದಿಗೆ ಬದುಕಿದರೆ ಜಯಂತಿಗಳ ಆಚರಣೆಗೆ ಅರ್ಥ ಬರುತ್ತದೆ ಕೋವಿಡ್ ಕಾರಣದಿಂದಾಗಿ ಈ ಬಾರಿಯ ಆಚರಣೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಿದ್ದು ಮುಂದಿನ ದಿನಗಳಲ್ಲಿ ಅದ್ದೂರಿ ಆಚರಣೆ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಸದಸ್ಯ ರತೀಶ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಖಚಾಂಚಿ ಚಂದ್ರಶೇಖರ್, ಮಹಿಳಾ ಸಂಘದ ಅಧ್ಯಕ್ಷೆ ಸಂಧ್ಯಾರಾಣಿ, ಸುಮಿತ್ರಾ, ಜಯಶೀಲ ಸೇರಿದಂತೆ ಮತ್ತಿತರರು ಇದ್ದರು.

























Discussion about this post