ಚಿಕ್ಕಮಗಳೂರು: ದೇಶದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರದ ದುರಾಡಳಿತ ವ್ಯವಸ್ಥೆಯ ವಿರುದ್ದ ಬೇಸತ್ತು ಬಿ.ಎಲ್.ಪ್ರವೀಣ್ ನೇತೃತ್ವದಲ್ಲಿ ಹತ್ತಾರು ಯುವ ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರನ್ನು ಬರಮಾಡಿಕೊಂಡು ವಿಧಾನ ಪರಿಷತ್ತಿನ ಮಾಜಿ ಉಪಸಭಾಪತಿ ಬಿ.ಎಲ್ ಶಂಕರ್ ಮಾತನಾಡಿ ರಾಜಕೀಯ ಪಕ್ಷಗಳು ಜನರ ಬದುಕಲ್ಲಿ ಬದಲಾವಣೆ ತರಲು ಮುಂದಾಗಬೇಕು ಆದರೆ ಸದ್ಯದ ಸನ್ನಿವೇಶದಲ್ಲಿ ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಅಸಮರ್ಥ ದುರಾಳಿತ ತುಂಬಿದೆ, ಇದಕ್ಕೆ ಬೇಸತ್ತು ವಿವಿಧ ಪಕ್ಷಗಳ ಯುವ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಸ್ವಾಗತಾರ್ಹ ಎಂದರು.
ಇತ್ತೀಚಿನ ಆಡಳಿತ ವ್ಯವಸ್ಥೆಯಲ್ಲಿ ಪೆಗಾಸಸ್ ಎಂಬ ವೈರಸ್ ಮೂಲಕ ವಿಪಕ್ಷಗಳ ಚಟುವಟಿಕೆಗಳನ್ನು ಕದ್ದು ಆಲಿಸುವ ಮೂಲಕ ರಾಜಕಾರಣ ಮಾಡಲು ಮುಂದಾಗಿದೆ. ಈ ಬಗ್ಗೆ ಯುವಕಾರ್ಯಕರ್ತರು ಅರಿಯಬೇಕು ಯಾವುದೇ ಪಕ್ಷದೊಂದಿಗೆ ರಾಜೀ ಸಂದಾನವಿಲ್ಲದೇ ತಳಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಕೇಂದ್ರದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಬಡವರ ಪರವಾದ ಯೋಜನೆಗಳು ಜಾರಿಯಾದವು ಅಂದಿನ ಆಡಳಿತ ವ್ಯವಸ್ಥೆಯನ್ನು ಮೆಚ್ಚಿ ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಫಡೆಗೊಂಡಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ, ಬಿಜೆಪಿ ಸೈದ್ಧಾಂತಿಕವಾಗಿ ಧರ್ಮ, ಜಾತಿ ಆಧಾರಿತವಾಗಿ ರಾಜಕಾರಣ ಮಾಡುತ್ತಿದೆ. ಸರ್ವರ ಏಳಿಗೆ ಬದಲಾಗಿ ಬಂಡವಾಳ ಷಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶವನ್ನು ಕಟ್ಟುವಲ್ಲಿ ಯುವಜನತೆ ಪಾತ್ರ ದೊಡ್ಡದು, ಹಾಗೇಯೆ ಪಕ್ಷವನ್ನು ಸಂಘಟಿಸಲು ಯುವಪಡೆ ಒಗ್ಗಟ್ಟಾಗಬೇಕು, ಬೂತ್ ಮಟ್ಟದಲ್ಲಿ ವಿವಿಧ ಚಟುವಟಿಕೆ ಮೂಲಕ ಪಕ್ಷವನ್ನು ಬಲವರ್ಧನೆಗೊಳಿಸಬೇಕು, ಕ್ಷೇತ್ರದ ಸಂಸದೆ ಕೇಂದ್ರ ಸಚಿವರಾದರೂ ರೈತರು, ಬೆಳೆಗಾರರ ಸಮಸ್ಯೆಗಳನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ ಎಂದು ದೂಷಿಸಿದರು.
ಕಾಂಗ್ರೆಸ್ ಮುಖಂಡ ಬಿ.ಎಲ್ ಪ್ರವೀಣ್ ಮಾತನಾಡಿ ಕಾಂಗ್ರೆಸ್ ಐತಿಹಾಸಿಕ ಹಿನ್ನಲೆ ಉಳ್ಳ ಪಕ್ಷ, ಆ ನಿಟ್ಟಿನಲ್ಲಿ ಪಕ್ಷದ ಕಾರ್ಯತತ್ಪರತೆಯನ್ನು ಒಪ್ಪಿ ಇಂದು ವಿವಿಧ ಪಕ್ಷಗಳನ್ನು ತೊರೆದು ಅನೇಕ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಮುಕ್ತವನ್ನಾಗಿ ಮಾಡುವುದು ಮುಖ್ಯ ಗುರಿಯಾಗಿದೆ ಎಂದರು.
ಪಕ್ಷವನ್ನು ಸಂಘಟಿಸುವ ಮೂಲಕ ಜಿಲ್ಲಾ, ತಾಲ್ಲೂಕು, ಹಾಗೂ ಸ್ಥಳೀಯ ಪಂಚಾಯಿತಿ ಚುನಾವಣೆಗೆ ಸಜ್ಜುಗೊಳಿಸಲಾಗುವುದು ಇದಕ್ಕಾಗಿ ಎಲ್ಲಾ ಹಿರಿಯ ಮುಖಂಡರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಡಾ. ವಿಜಯ್‌ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್, ಎಐಸಿಸಿ ರಾಜ್ಯ ಕಾರ್ಯದರ್ಶಿ ಬಿ.ಎಂ ಸಂದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಮುಖಂಡರಾದ ವಕೀಲ ಪ್ರಶಾಂತ್, ಮಾಡ್ಲ ಪ್ರಕಾಶ್, ಶಿವಾನಂದಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

























Discussion about this post