ಚಿಕ್ಕಮಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಬೇಕು, ಶಿಕ್ಷಣದಿಂದ ಯಾರೊಬ್ಬರು ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಮಗ್ರ ಏಳಿಗೆಗಾಗಿ ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಜಿಲ್ಲಾಪಂಚಾಯಿತಿ ಬಳಿಯ ಕನಕ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯ ಮತ್ತು ದೇವರಾಜು ಅರಸು ಮತ್ತು ಅಂಬೇಡ್ಕರ್ ಭವನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕು ಎನ್ನುವ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಗ್ರ ಏಳಿಗೆಗೆ ವಿವಿಧ ಯೋಜನೆಗಳನ್ನು ರೂಪಿಸಿದೆ. ಶೈಕ್ಷಣಿಕವಾಗಿ, ಆರ್ಥಿಕ ಏಳಿಗೆಗೆ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ, ವಸತಿ ನಿಲಯಗಳ ಸ್ಥಾಪನೆ, ಸಮುದಾಯ ಭವನ ನಿರ್ಮಾಣ, ಶಿಕ್ಷಣಕ್ಕೆ ಪ್ರೋತ್ಸಾಹದ ಮೂಲಕ ಅವರ ಏಳಿಗೆಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟರ ಕಾಲೋನಿಯಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಅಗತ್ಯ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯನ್ನು ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ವ್ಯವಸ್ಥೆ ನೀಡಲು, ಬಡವರ ಪರವಾಗಿ ಯೋಜನೆಗಳನ್ನು ರೂಪಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸ್ವಚ್ಚಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಗಾಂಧಿಜಯಂತಿಯಂದು ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳೊಂದಿಗೆ ರಾಜ್ಯಾದ್ಯಂತ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ೫ ವರೆ ಸಾವಿರ ವಸತಿ ಶಾಲೆಗಳಿದ್ದು ಅಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಜೊತೆಗೆ ಕೊರತೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.
ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಬೇಕು ಅಂಬೇಡ್ಕರ್ ಅವರ ಸಮಾನತೆ ಆಶಯಗಳು ಜಾರಿಯಾಗಬೇಕು ಪ್ರತಿಯೊಬ್ಬರು ಸಾಮರಸ್ಯದ ಬದುಕು ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಜತೆಗೆ ಪರಿಶಿಷ್ಟರ ಹಾಗೂ ಹಿಂದುಳಿದವರ ಏಳಿಗೆಗೆ ಇಲಾಖೆ ಸದಾ ಶ್ರಮಿಸಲು ಬದ್ದ ಎಂದು ತಿಳಿಸಿದರು.
ಶಾಸಕ ಸಿ.ಟಿ. ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳ ಸಮಗ್ರ ಏಳಿಗೆಗೆ ಹಲವಾರು ಸವಲತ್ತು ನೀಡುತ್ತಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಶಾಲೆಗಳು ಎಂಬ ಕೀಳರಿಮೆ ಬಿಡಬೇಕು, ಬದುಕಿನಲ್ಲಿ ಪರಿವರ್ತನೆಯಾಗುವ ನಿಟ್ಟಿನಲ್ಲಿ ಶಿಕ್ಷಣ ಅಗತ್ಯವಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪ್ರಾದೇಶಿಕತೆ ಜೊತೆಗೆ ಕೌಶಲ್ಯಯುತ ಶಿಕ್ಷಣಕ್ಕೆ ಹೆಚ್ಚು ಪ್ರಾಧನ್ಯತೆ ನೀಡಲಾಗಿದೆ, ಜತೆಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಅಧ್ಯಯನ ಮಾಡುವಂತೆ ಒತ್ತು ನೀಡಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಶಾಸಕ ರಾಜೇಗೌಡ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಲೋಪದೋಷಗಳ ಪುನರ್ ಪರಿಶೀಲನೆ ಮಾಡಿ ತಿದ್ದುಪಡಿ ಅಗತ್ಯವಿದೆ. ಪಬ್ಲಿಕ್ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವ ಮೂಲಕ ಸಮಗ್ರ ಏಳಿಗೆಗೆ ಶ್ರಮಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು. ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಬಿ.ವಿ.ಚೈತ್ರಾ, ಎನ್.ಆರ್ ಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯಾಭಾನು, ಶಕುಂತಲಾ, ವಾಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post