ಚಿಕ್ಕಮಗಳೂರು: ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಸಮಾಜದ ಉಪಪಂಗಡಗಳು ಸಂಘಟಿತರಾಗಬೇಕಿದೆ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಅವರು ರತ್ನಗಿರಿ ರಸ್ತೆಯ ಜಾನಕಿರಾಮ ಸಭಾಂಗಣದಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ವತಿಯಿಂದ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈಡಿಗ ಸಮಾಜದಲ್ಲಿ ೨೬ ಉಪಪಂಗಡಗಳಿದ್ದು ಎಲ್ಲವೂ ವಿಂಗಡಣೆಯಾಗಿವೆ ಆದ ಕಾರಣ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲವಾಗಿವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅವಕಾಶ ವಂಚಿತರಾಗಿದ್ದು ಅನುದಾನಗಳನ್ನು ಪಡೆದು ಸಬಲರಾಗಲು ಸಮಾಜದ ಎಲ್ಲಾ ಉಪಪಂಗಡಗಳು ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು.
ಈಗಾಗಲೇ ರಾಜ್ಯ ಪ್ರವಾಸ ಕೈಗೊಳ್ಳುವ ಮೂಲಕ ಸಮಾಜದ ನಾಡಿ ಮಿಡಿತ ಏನು ಎಂಬುದನ್ನು ಅರಿಯಲಾಗಿದೆ, ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜ ಬಲಿಷ್ಟಗೊಳ್ಳಬೇಕಿದೆ, ಸಮಾಜದ ಶ್ರೇಯೊಭಿವೃದ್ಧಿ ನಿಗಮಮಂಡಳಿ ಮೂಲಕ ಹೆಚ್ಚು ಅನುದಾನ ದೊರಕಬೇಕಿದೆ ಎಂದರು.
ಸಮಾಜದ ಬಹುತೇಕ ಮಂದಿ ತಮ್ಮ ಕುಲಕಸುಬು ಬಿಟ್ಟು ಬೀದಿಪಾಲಾಗಿದ್ದು ಉಪಪಂಗಡಗಳಿಗೆ ಸವಲತ್ತುಗಳು ದೊರಕಬೇಕಿದೆ. ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಕೊರತೆ ಇದೆ ಇದನ್ನು ನಿವಾರಿಸಲು ನಿಟ್ಟಿನಲ್ಲಿ ಸಮಗ್ರ ಏಳಿಗೆಗೆ ಸರ್ಕಾರದ ಮೇಲೆ ಒತ್ತಡ ತರಲು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈಡಿಗ ಸಮಾಜದ ಮುಖಂಡ ರಾಜಪ್ಪ, ಪ್ರ್ರಾಸ್ತಾವಿಕವಾಗಿ ಮಾತನಾಡಿ ಸಮಾಜವು ಎಲ್ಲಾ ರಂಗದಲ್ಲಿ ಬಲಗೊಳ್ಳಬೇಕಿದೆ, ನಾರಾಯಣ ಗುರುಗಳು ಕರೆ ನೀಡಿದಂತೆ ಸಂಘಟನೆ, ಸಬಲತೆ ಅತೀ ಮುಖ್ಯ, ಹರಿದು ಹಂಚಿ ಹೋಗಿರುವ ೨೬ ಒಳಪಂಗಡಗಳು ಒಂದುಗೂಡಬೇಕು. ಸರ್ಕಾರದ ಸವಲತ್ತುಗಳನ್ನು ಪಡೆಯಲು ರಾಜ್ಯಾಧ್ಯಕ್ಷರು ಅವಿರತವಾಗಿ ಶ್ರಮಿಸುತ್ತಿದ್ದು ನಾವೆಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ನಿವೃತ್ತ ಶಿರಸ್ಥೆದಾರ್ ರತ್ನಾಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಕಾರ್ಯದರ್ಶಿ ಉಮೇಶ್, ಬಿಲ್ಲವ ಸಮಾಜದ ಅಧ್ಯಕ್ಷ ರಾಜಣ್ಣ, ಶ್ರೀ ಬ್ರಹ್ಮಗುರು ನಾರಾಯಣ ಗುರು ವೇದಿಕೆ ಅಧ್ಯಕ್ಷ ಕೃಷ್ಣಪ್ಪ ಇದ್ದರು ಪ್ರವೀಣ್ ಪೂಜಾರಿ ಸ್ವಾಗತಿಸಿ ಲಕ್ಷ್ಮಣ್ ವಂದಿಸಿದರು.

























Discussion about this post