ಚಿಕ್ಕಮಗಳೂರು: ಬ್ರಿಟಿಷರ ವಿರುದ್ಧ ಹೋರಾಡಿ ದೇಶವನ್ನು ಬ್ರಿಟಿಷರ ದಾಶ್ಯದಿಂದ ಮುಕ್ತ ಮಾಡಿದ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನಗಳ ವಿಚಾರಗಳನ್ನು ಇಂದಿನ ಯುವಪೀಳಿಗೆ ಮಾದರಿಯಾಗಿ ಸ್ವೀಕರಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ತಮ್ಮ ಶ್ರಮವನ್ನು ವಿನಿಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದರು.
೭೫ ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಅವರು ಅಜ್ಜಂಪುರ ಟೌನ್ನಲ್ಲಿವಾಸವಾಗಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಏಕೋರಾಮಸ್ವಾಮಿ ಅವರ ಸ್ವಗೃಹದಲ್ಲಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವೇ ಅತ್ಯಂತ ರೋಚಕ ಮತ್ತು ಪ್ರೇರಣದಾಯಕವಾಗಿದೆ. ಈ ಸಂಗ್ರಾಮದಲ್ಲಿ ಅವಿರತ ಹೋರಾಟ ಮಾಡಿ ಸಾವಿರಾರು ದೇಶ ಪ್ರೇಮಿಗಳು ತಮ್ಮ ಇಡೀ ಬದುಕನ್ನೇ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಪರಕೀಯರ ದಾಸ್ಯದ ಕಪಿಮುಷ್ಠಿಯಿಂದ ದೇಶವನ್ನು ಬಿಡುಗಡೆ ಮಾಡಲು ಹಾಗೂ ದೇಶದ ಎಲ್ಲಾ ಪ್ರಜೆಗಳು ಸ್ವಾತಂತ್ರ್ಯರಾಗಿ ಜೀವನ ಮಾಡಲು ಲೆಕ್ಕವಿಲ್ಲದಷ್ಟು ತ್ಯಾಗ, ಬಲಿದಾನಗಳು ಆಗಿ ಹೋಗಿವೆ ಎಂದು ಹೇಳಿದರು.
ಇವೆಲ್ಲವನ್ನು ಯುವಪೀಳಿಗೆ ಗಂಭೀರವಾಗಿ ಪರಿಗಣಿಸಿ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶದ ಋಣವನ್ನು ತಿರಿಸಬೇಕು. ಈ ಹಿಂದೆ ನಮ್ಮ ಹಿರಿಯರು ದೇಶ ಭಕ್ತಿಯ ಬದ್ದತೆಯಿಂದ ಬಿಟ್ರಿಷರ ವಿರುದ್ಧ ಹೋರಾಟ ಮಾಡದೆ ಇದ್ದಿದ್ದರೆ ಇಂದಿಗೂ ಪರಕೀಯರ ಗುಲಾಮರಾಗಿಯೆ ಇರಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ ಅಂದಿನ ಹಿರಿಯರಲ್ಲಿ ಅನೇಕರು ಈವೆಲ್ಲವನ್ನು ಮನಗಂಡು ತಮ್ಮ ವೈಯಕ್ತಿಕ ಬದುಕನ್ನು ಸಂಪೂರ್ಣವಾಗಿ ಬದಿಗಿಟ್ಟು ಹಗಲಿರುಳು ದೇಶ ಸೇವೆ ಮಾಡಿದ್ದಾರೆ ಎಂದು ತಿಳಿಸಿದರು.
ಅವರು ಮಾಡಿರುವ ಮಹಾತ್ಕಾರ್ಯಕ್ಕೆ ಎಂದೆಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ಸ್ವಾತಂತ್ರ್ಯ ಸೇನಾನಿಗಳಲ್ಲಿ ಇಂದು ಬೆರಳೆಣಿಕೆಯಷ್ಟೆ ಮಂದಿ ನಮ್ಮ ಮಧ್ಯೆ ಇದ್ದಾರೆ. ಅವರನ್ನು ಕಾಣುವ, ಅವರೊಂದಿಗೆ ಮಾತನಾಡುವುದು ನಮ್ಮೆಲ್ಲರ ಪುಣ್ಯ ಮತ್ತು ಹೆಮ್ಮೆಯಾಗಿದೆ. ಇಂದಿನ ಯುವಪೀಳಿಗೆಗೆ ಅವರ ಅನುಭವ, ತತ್ವಾದರ್ಶಗಳ ಜೊತೆಗೆ ದೇಶ ಪ್ರೇಮದ ಸಂದೇಶಗಳು ಉತ್ತಮ ಭವಿಷ್ಯ ಮತ್ತು ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಪಾಠಗಳಾಗಬೇಕು. ಜಿಲ್ಲಾಡಳಿತ ಸದಾ ಸ್ವಾತಂತ್ರ್ಯ ಹೋರಾಟಗಾರರ ಹಿತಕಾಯುವಲ್ಲಿ ಬದ್ದವಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಏಕೋರಾಮಸ್ವಾಮಿ ಅವರು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಾತ್ರ ಮಹಾತ್ವದ್ದಾಗಿದೆ. ೧೯೨೭ ರಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಜಿಲ್ಲೆಗೆ ಆಗಮಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಪ್ರೇರೆಪಿಸಿದರು. ಯುವಕರಾದ ನಾವು ಸ್ವಾತಂತ್ರ್ಯದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸುತ್ತಿದ್ದೆವು ಜಿಲ್ಲೆಯಿಂದ ಬಳ್ಳಾರಿಯವರೆಗೂ ಕಾಲ್ನೆಡಿಗೆಯಲ್ಲೆ ನಡೆದುಕೊಂಡು ಹೋಗಿ ಹಳ್ಳಿಗಳಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪ್ರೇರೆಪಿಸುತ್ತಿದ್ದೆವು ಎಂದರು. ಈ ಸಂದರ್ಭದಲ್ಲಿ ಅಜ್ಜಂಪುರ ತಹಸಿಲ್ದಾರ್ ವಿಶ್ವೇಶ್ವರ ರೆಡ್ಡಿ ಉಪಸ್ಥಿತರಿದ್ದರು.
ಬಿರೂರಿನಲ್ಲಿ ವಾಸವಾಗಿರುವ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಬಿ.ಪಿ ಅವರ ಮನೆಗೆ ತರೀಕೆರೆ ಉಪವಿಭಾಗಾಧಿಕಾರಿ ಸಿದ್ದಲಿಂಗ ರೆಡ್ಡಿ ತೆರಳಿ ಚಂದ್ರಶೇಖರ್ ಬಿ.ಪಿ ಅವರನ್ನು ಸನ್ಮಾನಿಸಿದರು. ಕೊಪ್ಪದ ಸಂತೆ ಮನೆಯಲ್ಲಿ ವಾಸವಾಗಿರುವ ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠರಾವ್. ಕೆ ಅವರ ಮನೆಗೆ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ನಾಗರಾಜು ಅವರು ಭೇಟಿ ನೀಡಿ ಶ್ರೀಕಂಠರಾವ್. ಕೆ. ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೊಪ್ಪ ತಹಸಿಲ್ದಾರ್ ಪರಮೇಶ್ವರ್, ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ನವೀನ್ ಉಪಸ್ಥಿತರಿದ್ದರು.

























Discussion about this post