ಕನ್ನಡನಾಡಿ ಸುದ್ದಿಜಾಲ: ಯೋಧರೊಬ್ಬರು ಸುಮಾರು 16 ವರ್ಷಗಳ ಹಿಂದೆ ಕಣ್ಮರೆಯಾಗಿದ್ದರು, ಅವರು ಬದುಕಿದ್ದಾರೆ ಎಂದು ಕುಟುಂಬದ ಸದಸ್ಯರು ಭಾವಿಸಿದ್ದರು. ಅವರ ಮೃತದೇಹದ ಭಾಗಗಳು ಉತ್ತರಕಾಶಿಯ 7,075 ಮೀಟರ್ ಎತ್ತರದ ಸತೋಪಂತ್ ಪರ್ವತದ ತುದಿಯಲ್ಲಿ ಪತ್ತೆಯಾಗಿವೆ.
2005ರಲ್ಲಿ ಗರ್ವಾಲ್ ಹಿಮಾಲಯ ಪ್ರದೇಶದಲ್ಲಿನ ಅಪಾಯಕಾರಿ ಸತೋಪಂತ್ ಪರ್ವತವನ್ನು ಏರಲು ಹೊರಟಿದ್ದ ಮೂವರು ಸೈನಿಕರು ಕಣ್ಮರೆಯಾಗಿದ್ದರು. ಇಬ್ಬರ ಮೃತದೇಹಗಳು ಬಳಿಕ ಪತ್ತೆಯಾಗಿದ್ದವು. ಉತ್ತರ ಪ್ರದೇಶದ ಯೋಧ ಅಮರೀಶ್ ತ್ಯಾಗಿ ಅವರ ದೇಹ ಸಿಕ್ಕಿರಲಿಲ್ಲ.
ಕಳೆದ ವಾರ ಸತೋಪಂತ್ ಪರ್ವತಾರೋಹಣಕ್ಕೆ ತೆರಳಿದ್ದ ಸೇನಾ ತಂಡಕ್ಕೆ ಮೃತದೇಹವೊಂದು ಸಿಕ್ಕಿತ್ತು. ಅದರ ಜತೆಯಲ್ಲಿ ಪರ್ವತಾರೋಹಣದ ಸಾಧನಗಳು ಕಂಡುಬಂದಿದ್ದವು. ಅದು ತ್ಯಾಗಿ ಅವರದ್ದೇ ದೇಹ ಎಂದು ಸೇನೆ ಖಚಿತಪಡಿಸಿದ್ದು, ಅದನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿದೆ.
ನಾಯ್ಕ್ ಅಮರೀಶ್ ತ್ಯಾಗಿ ಅವರಿಗೆ ಈ ಘಟನೆ ನಡೆಯುವಾಗ ೩೨ ವರ್ಷ ವಯಸ್ಸಾಗಿತ್ತು ಎಂದು 9ನೇ ಬಿಹಾರ ರೆಜಿಮೆಂಟ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಸೇನೆಯು ದೃಢೀಕರಣ ಪತ್ರ ಕಳಿಸಿದ ಬಳಿಕ ನಾವು ದೇಹವನ್ನು ಅವರಿಗೆ ಒಪ್ಪಿಸಿದೆವು ಎಂದು ಸಹ ಅವರು ಹೇಳಿದ್ದಾರೆ.
ಹದಿನಾರು ವರ್ಷಗಳ ಹಿಂದೆಯೇ ಮರೆಯಾಗಿದ್ದರೂ, ತ್ಯಾಗಿ ಅವರ ಹುಟ್ಟೂರು, ಮುರಾದನಗರದ ಹನ್ಸಾಲಿ ಅವರನ್ನು ಮರೆತಿರಲಿಲ್ಲ. ಅವರ ಮೃತದೇಹದ ಅವಶೇಷಗಳನ್ನು ಭಾರಿ ಮೆರವಣಿಗೆಯೊಂದಿಗೆ ತವರೂರಿಗೆ ಕರೆತರಲಾಯಿತು. ಜನರು ದೇಶಭಕ್ತಿಯ ಗೀತೆಗಳನ್ನು ಹಾಡಿ, ಘೋಷಣೆಗಳನ್ನು ಕೂಗಿದರು. ಧ್ವಜ ಹಾರಿಸಿ ಯೋಧನಿಗೆ ವಂದನೆ ಸಲ್ಲಿಸಿದರು. ಸೇನಾ ಗೌರವಗಳೊಂದಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು

























Discussion about this post