ಬೆಂಗಳೂರು: ಚಿಕ್ಕಮಗಳೂರಿನ ಜನತೆಯ ದಶಕಗಳ ಕನಸಾಗಿದ್ದ ಸಾಂಬಾರ್(ಸ್ಪೈಸ್) ಪಾರ್ಕ್ ಇದೀಗ ನನಸಾಗಲಿದೆ. ಬೆಂಗಳೂರಿನ ಖನಿಜ ಭವನದಲ್ಲಿರುವ ಉದ್ಯೋಗ ಮಿತ್ರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಜಂಟಿಯಾಗಿ ನಡೆಸಿದ ಸಭೆಯಲ್ಲಿ ಒಮ್ಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲೆಯ ಹೊಸಕೋಟೆ ಸಮೀಪದ ಅಂಬಾಲಿ ಗ್ರಾಮದಲ್ಲಿ ಸುಮಾರು 10 ಎಕರೆ ಜಮೀನನ್ನು ಈ ಉದ್ದೇಶಕ್ಕೆ ಗುರುತಿಸಿ, ಮಂಜೂರು ಮಾಡಲಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮ(ಕೆಐಎಡಿಬಿ)ವು ರೂ. 20,35,665 ಆರ್ಥಿಕ ನೆರವು ನೀಡಲಿದ್ದು, 10 ಎಕರೆ ಜಮೀನನಿನಲ್ಲಿ ಪಾರ್ಕ್ ನಿರ್ಮಾಣವಾಗಲಿದೆ.
ಘಟಕ ಸ್ಥಾಪನೆ: ರಾಜ್ಯದಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು “ವಿಶೇಷ ಘಟಕ” ಸ್ಥಾಪನೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಶೋಭಾ ಕರಂದ್ಲಾಜೆ ನಿರಾಣಿ ಅವರ ಮುಂದಿಟ್ಟರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಮುರುಗೇಶ್ ನಿರಾಣಿ ಅವರು ಶೀಘ್ರದಲ್ಲೇ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ವಿಶೇಷ ಘಟಕವನ್ನು ಆರಂಭಿಸಲಾಗುವುದು. ರೈತರಿಗೆ ಅನುಕೂಲಕ್ಕಾಗಿ ಈ ಕ್ರಮ ಕೈಗೊಂಡಿರುವುದಾಗಿ ಪ್ರಕಟಿಸಿದ್ದರು.
ಪರಿಹಾರ ಹೆಚ್ಚಳಕ್ಕೆ ಕ್ರಮ: ಇದೇ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು, ತಮ್ಮ ತವರು ಜಿಲ್ಲೆ ಬಾಗಲಕೋಟೆಯ ಜಮಖಂಡಿ ಉಪವಿಭಾಗದಲ್ಲಿ ಕೃಷ್ಣಾನದಿ ಪ್ರವಾಹದಿಂದ ಉಂಟಾಗಿರುವ ಸವಕಳಿ ಮಣ್ಣಿನ ಕುಸಿದ ಬಗ್ಗೆ ಸಚಿವರ ಗಮನ ಸೆಳೆದರು. ಮಳೆಗಾಲದಲ್ಲಿ ಪ್ರವಾಹ ಬಂದರೆ ಕೃಷ್ಣನದಿ ಉಕ್ಕಿ ಹರಿದು ಜಮಖಂಡಿ ಉಪವಿಭಾಗದಲ್ಲಿ ಪ್ರವಾಹ ಉಂಟಾಗುತ್ತದೆ. ಇದರಿಂದ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಹೋಗಿ ರೈತರುಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಪರಿಸ್ಥಿತಿ ವಿವರಿಸಿದರು.
ಅತಿವೃಷ್ಟಿ ಮತ್ತು ಪ್ರವಾಹ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಆಗಬಹುದಾದ ಕೊರಕಲು, ಭೂ ಸವಕಳಿಯಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಹೊಲ ಸಮತಟ್ಟು ಉಳಿಸಲು ರೈತರಿಗೆ ಕೇಂದ್ರದಿಂದ ಅಗತ್ಯ ಪರಿಹಾರ ಒದಗಿಸಲು ಎನ್‍ಡಿಆರ್ ಎಪ್ ಕಾನೂನಿನಲ್ಲಿ ಅವಕಾಶವಿದೆ ಆದರೆ ನೀಡುತ್ತಿರುವ ಪರಿಹಾರ ಸಾಕಾಗುತ್ತಿಲ್ಲ, ಪರಿಹಾರ ಹೆಚ್ಚಿಸಬೇಕೆಂದು ಸಹ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶೋಭಾ ಕರಂದ್ಲಾಜೆ ಅವರು ಈ ಸಂಬಂಧ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಜೊತೆ ಚರ್ಚಿಸಿ ರೈತರಿಗೆ ಪರಿಹಾರ ಹೆಚ್ಚಳ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದರು.

























Discussion about this post