- ರಾಜ್ಯಾದ್ಯಾಂತ ಜಿಲ್ಲೆ, ತಾಲ್ಲೂಕು, ಹೋಬಳಿಗಳಲ್ಲಿ ಹೋರಾಟ
- ಟ್ವಿಟ್ಟರ್ ನಲ್ಲೂ ಅಭಿಯಾನ
- ಹಿಂದಿ ಹೇರಿಕೆ ಸಲ್ಲ
ಬೆಂಗಳೂರು: ಹಿಂದಿಯೇತರ ಭಾಷೆಗಳ ಮೇಲೆ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶಗಳನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸೆಪ್ಟೆಂಬರ್ ೧೪ರಂದು ಬೆಳಿಗ್ಗೆ ೧೦ರಿಂದ ರಾತ್ರಿ ಹತ್ತರವರೆಗೆ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿದೆ.
ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾ ಮೊದಲಾದ ಕಾರ್ಯಕ್ರಮಗಳ ಹೆಸರಿನಲ್ಲಿ ನಮ್ಮ ತೆರಿಗೆ ಹಣ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಗೆ ಬಳಸಲಾಗುತ್ತಿದೆ. ಎಲ್ಲಾ ಕನ್ನಡಿಗರು #stophindiimpositon, #ಹಿಂದಿ ಹೇರಿಕೆನಿಲ್ಲಿಸಿ ಎಂಬ ಎರಡು ಹ್ಯಾಶ್ ಟ್ಯಾಗ್ ಬಳಸಿ ಟ್ಯಾಗ್ ಮಾಡಲು ಕರವೇ ಮನವಿ ಮಾಡಿದೆ.
ಹಿಂದಿ ಹೇರಿಕೆ ಕೇವಲ ಭಾಷಾ ಹೇರಿಕೆಯಾಗದೆ ಉದ್ಯೋಗಗಳನ್ನು ಸಹ ಕಸಿದಿದೆ. ಇತರೆ ಭಾಷಾ ಸಮುದಾಯಗಳ ಸಂಸ್ಕೃತಿ, ಪರಂಪರೆಗಳನ್ನು ನಗಣ್ಯವಾಗಿಸಿದೆ. ಇತರೆ ಭಾಷಿಗರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡಿದೆ ಎಂದು ಕರವೇ ಹೋರಾಟ ನಡೆಸುತ್ತಿದೆ.
ಸೆಪ್ಟೆಂಬರ್ 14ರಂದು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸಾವಿರಾರು ಬ್ಯಾಂಕ್ ಗಳ ಮುಂಭಾಗ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸ್ಥಳೀಯ ಶಾಸಕರು, ಸಂಸದರಿಗೆ ಆಗ್ರಹ ಪತ್ರಗಳನ್ನು ನೀಡಲಿದ್ದಾರೆ ಎಂದು ಕರವೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಮಸ್ತ ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಸೆಪ್ಟೆಂಬರ್ 14 ರಂದು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ, ವಾಟ್ಸಾಪ್, ಕ್ಲಬ್ ಹೌಸ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಧ್ವನಿ ಎತ್ತಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಸಲ್ಲಿಸಿದೆ.

























Discussion about this post