ಮಂಗಳೂರು: ಮಹಾತ್ಮಾ ಗಾಂಧೀಜಿಯನ್ನೆ ಬಿಟ್ಟಿಲ್ಲ ಸ್ವಾಮಿ ನಾವು, ಇನ್ನು ನೀವು ಯಾವ ಲೆಕ್ಕ ನಮಗೆ? ಹಿಂದೂಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಿದವರಿಗೆ ನಿಮ್ಮ ವಿಚಾರದಲ್ಲಿ ಆಲೋಚನೆ ಮಾಡಲ್ಲಿಕ್ಕೆ ಸಾಧ್ಯವಿಲ್ಲ ಎನ್ನುತ್ತೀರಾ? ಎಂಬುದಾಗಿ ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿಯವರೆ, ಯಡಿಯೂರಪ್ಪನವರೆ, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರೆ ನೆನಪಿಟ್ಟುಕೊಳ್ಳಿ ಬಹಳ ಕಠಿಣ ಆದೀತು ನಿಮಗೆ ಎಂದು ಬಹಿರಂಗ ಜೀವ ಬೆದರಿಕೆ ಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಮೊಟ್ಟೆ ಕದ್ದಾಯಿತು. ಮೊಟ್ಟೆಯಲ್ಲಿ ದುಡ್ಡು ಮಾಡಿದವರು ಈಗ ದೇವಸ್ಥಾನಗಳಲ್ಲಿ ದುಡ್ಡು ಮಾಡಲು ಯಾಕೆ ಹೋಗುತ್ತಿದ್ದೀರಿ? ನಿಮ್ಮ ಮೇಲೆ ಕೇಸು ದಾಖಲೆ ಮಾಡಿದ್ದೇವೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಳೆದ ಸಲ ಚಿತ್ರದುರ್ಗದಲ್ಲಿ ಬಿಜೆಪಿ ಸರ್ಕಾರದಿಂದ ದೇವಸ್ಥಾನದ ಮೇಲಿನ ದಾಳಿ ಖಂಡಿಸಿ ಹೋರಾಟ ಮಾಡಿದ್ದೆವು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದು ದೇವಸ್ಥಾನ ನೆಲಸಮ ಆಯ್ತು ಎಂದು ನೆನಪಿಸಿದರು.
ಮತ್ತೆ ಈಗ ಮೈಸೂರಿನಲ್ಲಿ ಪುರಾತನ ದೇವಸ್ಥಾನ ನೆಲಸಮ ಆಯ್ತು. ಅಲ್ಲದೆ ಇನ್ನೂ ಅನೇಕ ಧಾರ್ಮಿಕ ಕೇಂದ್ರಗಳ ಪಟ್ಟಿ ಕೊಟ್ಟಿದೆ. ಆದರೆ ಎಲ್ಲಾದರೂ ಇತಿಹಾಸದಲ್ಲಿ ಒಂದೇ ಒಂದು ಮಸೀದಿ, ಚರ್ಚ್ ಒಡೆದದ್ದನ್ನು ತೋರಿಸಲಿ. ಅದ್ಯಾಕೆ ದೇವಸ್ಥಾನಗಳೇ ಮಾತ್ರ ಟಾರ್ಗೆಟ್ ಆಗುತ್ತಿವೆ? ಎಂದು ಧರ್ಮೇಂದ್ರ ಹೇಳಿಕೆ ನೀಡಿದರು

























Discussion about this post