ಬೆಂಗಳೂರು: ವಜಾಗೊಂಡಿದ್ದ ಸಾರಿಗೆ ನೌಕರರ ಮರು ನೇಮಕಕ್ಕೆ ಸರ್ಕಾರ ಮಹತ್ವದ ಆದೇಶ ನೀಡಿದೆ. ಈ ಮೂಲಕ ೪,೨೦೦ ಸಾರಿಗೆ ನೌಕರರಿಗೆ ಸಚಿವ ಬಿ.ಶ್ರೀರಾಮುಲು ಸಿಹಿ ಸುದ್ದಿ ನೀಡಿದರು.
ಈ ಬಗ್ಗೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಸಾರಿಗೆ ಯೂನಿಯನ್ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. 12 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು. ನಿನ್ನೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗಿದೆ. ಸಾರಿಗೆ ಇಲಾಖೆಯಲ್ಲಿ ಯಾವುದೇ ರೀತಿ ತೊಂದರೆಯಾಗಬಾರದೆಂದು ಕ್ರಮ ಕೈಗೊಂಡಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ವೇತನ ತಾರತಮ್ಯ ಬಗ್ಗೆಯೂ ಸಾರಿಗೆ ನೌಕರರ ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆಯೂ ಮಾತಾನಾಡುವ ಯೋಚನೆ ಇದೆ. ಅವರ ಪ್ರಮುಖವಾದ ೪,೨೦೦ ಸಾರಿಗೆ ನೌಕರರನ್ನ ಪುನರ್ ನೇಮಕ ಬಗ್ಗೆ ಒತ್ತಡ ಇತ್ತು. ಈ ಬಗ್ಗೆ ಮೊದಲು ಆದ್ಯತೆ ಕೊಟ್ಟು ಮರು ನೇಮಕ ಮಾಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಇದೇ ವೇಳೆ ಸಾರಿಗೆ ನೌಕರರ ಬಹುತೇಕ ಎಲ್ಲಾ ಸಮಸ್ಯೆ ಪರಿಹಾರಿಸೋದಾಗಿ ಶ್ರೀರಾಮುಲು ಭರವಸೆ ನೀಡಿದರು. ಕಳೆದ ಮುಷ್ಕರದ ವೇಳೆ 4,200 ನೌಕರರನ್ನ ನಿಗಮಗಳು ವಜಾಗೊಳಿಸಿತ್ತು. ಮರು ನೇಮಕಕ್ಕಾಗಿ ಸಾರಿಗೆ ನೌಕರರ ಯೂನಿಯನ್ ಬೇಡಿಕೆ ಇಟ್ಟಿತ್ತು. ಹಲವಾರು ಪ್ರತಿಭಟನೆ ಸಹ ನಡೆದಿತ್ತು. ರಾಮುಲು ಎಲ್ಲಾ ನೌಕರರ ಯೂನಿಯನ್ ಮುಖಂಡರನ್ನ ಕರೆಸಿ ಮಾತುಕತೆ ನಡೆಸಿದರು. ಸಾರಿಗೆ ನೌಕರರ ಮುಖಂಡರಾದ ಅನಂತ ಸುಬ್ಬರಾವ್, ಸಿಐಟಿಯು ಮಂಜುನಾಥ್, ಪ್ರಕಾಶ್ ಸೇರಿ ಹಲವು ಮುಖಂಡರ ಜೊತೆ ಚರ್ಚೆ ನಡೆಸಿದ್ದರು.
ಇನ್ನು ಸಾರಿಗೆ ಸಚಿವರು ಶಾಲಾ, ಕಾಲೇಜಿಗೆ ಹೋಗುವುದಕ್ಕೆ ಮಕ್ಕಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದು, ಡಿಪೋಗಳಲ್ಲಿ ಕೆಲಸ ಮಾಡುವ ಸಾರಿಗೆ ನೌಕರರಿಗೆ ಕಿರುಕುಳ ಸೇರಿದಂತೆ, ಸಾರಿಗೆ ನೌಕರರ ಎಲ್ಲಾ ಸಮಸ್ಯೆ, ಬೇಡಿಕೆಗಳನ್ನ ಬಗೆಹರಿಸುತ್ತೇವೆ. ಸ್ವತಃ ನಾನೇ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಎಲ್ಲದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ರಾಮುಲು ಭರವಸೆಯ ಮಾತುಗಳನ್ನು ಹೇಳಿದರು

























Discussion about this post