ಮಂಗಳೂರು: ‘ನಮ್ಮ ದಸರಾ- ನಮ್ಮ ಸುರಕ್ಷೆ’ ಘೋಷ ವಾಕ್ಯದಡಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ವರ್ಷದ ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 7 ರಿಂದ 16 ರವರೆಗೆ ನಡೆಯಲಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿವೆ.
ಸರಕಾರ ವಿಧಿಸಿರುವ ಮಾರ್ಗಸೂಚಿ ಪ್ರಕಾರವೇ ದಸರಾ ನಡೆಸುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದು, ಅದರಂತೆಯೇ ಈ ಬಾರಿಯ ಎಲ್ಲ ಉತ್ಸವಗಳು ನಡೆಯಲಿದೆ. ಶಾರದಾ ಮೂರ್ತಿಯ ವಿಸರ್ಜನೆಯಂದು ದಸರಾ ಮೆರವಣಿಗೆ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಯಥಾವತ್ತಾಗಿ ನೆರವೇರಲಿವೆ ಎಂದು ಕುದ್ರೋಳಿ ಕ್ಷೇತ್ರದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಚ್. ಎಸ್. ಸಾಯಿರಾಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಚುವಲ್ ಮಾದರಿಯಲ್ಲಿ ನಡೆಸಲಾಗುತ್ತಿದ್ದು, ಸ್ಥಳೀಯ ಟಿವಿ ಚಾನೆಲ್‌ಗಳ ಮೂಲಕ ನೇರ ಪ್ರಸಾರವಾಗಲಿದೆ ಎಂದು ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು.
ಪ್ರತಿನಿತ್ಯ ಮಧ್ಯಾಹ್ನ12.30 ರಿಂದ 2.30 ರ ತನಕ ಅನ್ನಸಂತರ್ಪಣೆ ಇರಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ದಸರಾ ಕಾರ್ಯಕ್ರಮಗಳು:
ಅ.7ರಂದು ಮಹಾನವಮಿ ಉತ್ಸವ ಆರಂಭ. ಬೆಳಗ್ಗೆ 9 ಕ್ಕೆ ಗುರುಪ್ರಾರ್ಥನೆ 11.30ಕ್ಕೆ ಕಲಶ ಪ್ರತಿಷ್ಠೆ ಹಾಗೂ 11.40ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ. 12.30 ಕ್ಕೆ ಪುಷ್ಪಾಲಂಕಾರ ಮಹಾ ಪೂಜೆ, ಸಂಜೆ 7 ಕ್ಕೆ ಭಜನೆ, ರಾತ್ರಿ 8.30 ರಿಂದ ಶ್ರೀದೇವಿ ಪುಷ್ಪಾಲಂಕಾರ ಮಹಾ ಪೂಜೆ ಮತ್ತು ಉತ್ಸವ ನಡೆಯಲಿದೆ.
ವಿಶೇಷ ಪೂಜೆಗಳು: ಅ. 8 ರಂದು ಬೆಳಗ್ಗೆ 10 ಕ್ಕೆ ದುರ್ಗಾ ಹೋಮ,
ಅ. 9 ರಂದು ಆರ್ಯ ದುರ್ಗಾ ಹೋಮ,
ಅ. 10 ರಂದು ಭಗವತೀ ದುರ್ಗಾ ಹೋಮ,
ಅ. 11 ರಂದು ಕುಮಾರಿ ದುರ್ಗಾ ಹೋಮ,
ಅ.12 ರಂದು ಮಹಿಷ ಮರ್ದಿನಿ ದುರ್ಗಾ ಹೋಮ,
ಅ. 13ರಂದು ಚಂಡಿಕಾ ಹೋಮ,
ಅ. 14 ರಂದು ಸರಸ್ವತಿ ದುರ್ಗಾ ಹೋಮ, 11.30ಕ್ಕೆ ಶತ ಸೀಯಾಳಾಭಿಷೇಕ ನಡೆಯಲಿದೆ.
ಅ. 15 ರಂದು ವಾಗೀಶ್ವರಿ ದುರ್ಗಾ ಹೋಮ, 12.30 ಕ್ಕೆ ಶಿವ ಪೂಜೆ, 7 ರಿಂದ ಶ್ರೀದೇವಿ ಪುಷ್ಪಾಲಂಕಾರ, ಮಹಾ ಪೂಜೆ, ಉತ್ಸವ, ರಾತ್ರಿ 8 ಕ್ಕೆ ಪುಷ್ಕರಿಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ಬಳಿಕ ಶಾರದಾ ವಿಸರ್ಜನೆ, ಅವಭೃತ ಸ್ನಾನ.
ಅ. 16 ರಂದು ರಾತ್ರಿ 7 ಕ್ಕೆ ಭಜನೆ, 7.30 ರಿಂದ ಗುರು ಪೂಜೆ ನಡೆಯಲಿದೆ.
ದೇವರ ದರ್ಶನಕ್ಕೆ ನಿಬಂಧನೆಗಳು:
ಕ್ಷೇತ್ರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ.
ಮಾಸ್ಕ್ ಇಲ್ಲದವರಿಗೆ ಪ್ರವೇಶ ನಿಷೇಧಿಸಲಾಗುತ್ತದೆ.
ದೇವಸ್ಥಾನದ ಪ್ರಾಂಗಣ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳ ಪಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು.
ದೇಗುಲದ ವಠಾರ ಮತ್ತು ಒಳಗೆ, ದರ್ಬಾರು ಮಂಟಪದಲ್ಲಿ ಮೊಬೈಲ್ ಬಳಕೆ, ಫೋಟೊ, ಸೆಲ್ಫಿ ನಿಷೇಧಿಸಲಾಗಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

























Discussion about this post