ಸುಳ್ಯ: ವ್ಯಕ್ತಿಯೊಬ್ಬರು ಅವಾಚ್ಯ ಪದಗಳಿಂದ ತಮ್ಮನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸುಳ್ಯ ನ್ಯಾಯಾಲಯದಲ್ಲಿ ಹಾಜರಾಗಿ ಸಾಕ್ಷ್ಯ ನುಡಿದರು.
ಶಿವಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಸುಳ್ಯ ತಾಲೂಕು ಬೆಳ್ಳಾರೆಯ ಸಾಯಿ ಗಿರಿಧರ್ ರೈ ಎಂಬುವವರು ಕರೆ ಮಾಡಿ ಡಿಕೆಶಿ ಹಾಗೂ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಹಿಂದೆ ವಾರೆಂಟ್ ಹೊರಡಿಸಿ ಸಾಕ್ಷ್ಯ ನುಡಿಯಲು ಶಿವಕುಮಾರ್ ಅವರಿಗೆ ಸೂಚನೆ ನೀಡಿತ್ತು.
ಘಟನೆ ವಿವರ: ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ರೈ 2016ರ ಫೆಬ್ರವರಿ 28ರಂದು ಡಿ ಕೆ ಶಿವಕುಮಾರ್ ಅವರಿಗೆ ಫೋನ್ ಕರೆ ಮಾಡಿ ತಮ್ಮ ಊರಿನ ಸುತ್ತಮುತ್ತ ಸತತವಾಗಿ ಕಾಡುತ್ತಿದ್ದ ವಿದ್ಯುತ್ ಸಮಸ್ಯೆ ಬಗ್ಗೆ ತಿಳಿಸಿದ್ದರು. ದೂರವಾಣಿಯ ಮಾತುಕತೆಯ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹಾಗೂ ಅವಾಚ್ಯ ಶಬ್ದಗಳನ್ನು ಸಹ ಬಳಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಶಿವಕುಮಾರ್ ಮೆಸ್ಕಾಂ ಅಧಿಕಾರಿಗಳ ಮೂಲಕವೇ ರೈ ವಿರುದ್ಙ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂದು ರಾತ್ರಿ ರೈ ಅವರನ್ನು ಬಂಧಿಸಿದ್ದರು. ಬಂಧನಕ್ಕೆ ರೈ ಹಾಗೂ ಅವರ ಕುಟುಂಬ ಪ್ರತಿರೋಧ ಒಡ್ಡಿದ್ದರಿಂದ ಪೊಲೀಸರು ಅವರ ಮನೆ ಛಾವಣಿ ಹತ್ತಿ ಹೆಂಚುಗಳನ್ನು ಒಡೆದು ಬಂಧಿಸಿದ್ದರು. ಬಂಧನ ಮಾಡಿದ ರೀತಿಯು ಕೋಲಾಹಲ ಸೃಷ್ಠಿ ಮಾಡಿತ್ತು.
ಈ ಕುರಿತು ೩ ಬಾರಿ ಡಿಕೆಶಿ ಅವರಿಗೆ ಸಮನ್ಸ್ ನೀಡಿತ್ತು. ಅಲ್ಲದೆ ಒಮ್ಮೆ ವಾರೆಂಟ್ ಕೂಡ ಜಾರಿ ಮಾಡಿದ್ದರೂ ಸಹ ಡಿಕೆಶಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ಹಿಂದಿನ ವಿಚಾರಣೆ ವೇಳೆ ಮತ್ತೊಮ್ಮೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.
ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಸಾಕ್ಷಿಯಾಗಿ ಬರಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಮೊದಲ ಬಾರಿಗೆ ಇದು ನನಗೆ ತಿಳಿದಿರಲಿಲ್ಲ. ಹೀಗಾಗಿ ಬಂದಿರಲಿಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಈಗ ಆಗಮಿಸಿದ್ದೇನೆ ಎಂದು ಹೇಳಿದರು.

























Discussion about this post