ಚಿಕ್ಕಮಗಳೂರು: ಅತಿವೃಷ್ಟಿ, ಭೂಕುಸಿತ ಮತ್ತಿತರ ಕಾರಣದಿಂದಾಗಿ ಕಾಫಿ ಬೆಳೆ ಹಾನಿ ಸಂಭವಿಸಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದು ಸರ್ಕಾರ ಅಸ್ತಿತ್ವದಲ್ಲಿರುವ ಎಲ್ಲಾ ಸಾಲಗಳನ್ನು ದೀರ್ಘಾವಧಿಯ ಮರುಪಾವತಿ ಅವಧಿಯೊಂದಿಗೆ ಮರು ರಚಿಸಿ ಏಕ ಅವಧಿಯ ಸಾಲವಾಗಿ ಘೋಷಿಸಬೇಕು ಮತ್ತು ಕಡಿಮೆ ಬಡ್ಡಿಯೊಂದಿಗೆ ಹೊಸ ಕೆಲಸದ ಬಂಡವಾಳವನ್ನು ವಿಸ್ತರಿಸುವಂತೆ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಎಸ್. ಭೋಜೇಗೌಡ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚಿಗೆ ಬೆಂಗಳೂರಿನ ಕಾಫಿ ಮಂಡಳಿ ಕಛೇರಿಯಲ್ಲಿ ಕಾಫಿ ಬೆಳೆಗಾರರು, ಸಂಸ್ಕರಣಾಗಾರರು, ರಫ್ತುದಾರರು, ಬ್ಯಾಂಕರ್‍ಸ್ ಸಭೆಯಲಿ ಈ ಬಗ್ಗೆ ಚರ್ಚಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾಫಿ ಬೆಳೆ ಹಾನಿ ಜತೆಗೆ ಭೂಕುಸಿತದಿಂದಾಗಿ ಅನೇಕ ರೈತರು ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಎನ್‌ಡಿಆರ್‌ಎಫ್ ಮತ್ತು ರಾಜ್ಯದ ಎಸ್‌ಡಿಆರ್‌ಎಫ್ ತಂಡಗಳು ಬೆಳೆ ಹಾಗೂ ಜಮೀನು ಹಾನಿಯ ಸಮೀಕ್ಷೆ ನಡೆಸಿ ವರದಿ ನೀಡಿವೆ ಎಂದರು.
ಅದರಂತೆ ಶೇ ೩೩ ರಿಂದ ೫೫ ರಷ್ಟು ಬೆಳೆಹಾನಿ ಜತೆಗೆ ಜಮೀನು ಕಳೆದುಕೊಂಡ ಬೆಳೆಗಾರರಿಗೆ ಕಾಫಿ ತೋಟವನ್ನು ಮರುನಿರ್ಮಾಣ ಹೊಂದಿಕೆಯಾಗುವಂತೆ ಹೊಸದಾಗಿ ಸಾಲ ವಿತರಣೆ ಮಾಡುವಂತೆ ಕೇಂದ್ರ ಆರ್‌ಬಿಐ ಮಾರ್ಗಸೂಚಿ ಹೊರಡಿಸಿದೆ. ಆದರೆ ರಾಜ್ಯದಲ್ಲಿನ ಯಾವೊಂದು ಬ್ಯಾಂಕ್‌ಗಳು ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ, ಸಾಲ ವಿತರಣೆಗೂ ಮುಂದಾಗಿಲ್ಲ ಎಂದು ದೂಷಿಸಿ ದರು.
ಕಾಫಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾಫಿ ಬೆಳೆಗಾರರು, ಸಂಸ್ಕರಣಾಗಾರರು, ರಫ್ತುದಾರರು ಮತ್ತು ಇತರ ಪಾಲುದಾರರೊಂದಿಗೆ ಸವಿವರವಾದ ಚರ್ಚೆ ನಡೆಸುವ ಅಗತ್ಯವಿದ್ದು ದಿನಾಂಕ ನಿಗಧಿಪಡಿಸಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಸರ್ಫಾಸಿ ಕಾಯಿದೆ ಅಡಿ ಬ್ಯಾಂಕುಗಳು ನೀಡಿರುವ ನೋಟಿಸ್‌ಗಳಿಂದ ಬೆಳೆಗಾರರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಲಾಕ್‌ಡೌನ್, ನಿರಂತರ ಮಳೆ , ಬೆಳೆಹಾನಿಯಿಂದಾಗಿ ಬೆಳೆಗಾರರು ತತ್ತರಿಸಿದ್ದು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಜತೆಗೆ ಸರ್ಫಾಸಿ ಕಾಯ್ದೆ ಹೆಸರಲ್ಲಿ ಬ್ಯಾಂಕ್‌ಗಳ ನೋಟಿಸ್ ನೀಡಿ ಮತ್ತಷ್ಟು ಜರ್ಜರಿತವಾಗುವಂತೆ ಮಾಡುತ್ತಿದ್ದಾರೆ. ಬ್ಯಾಂಕ್‌ಗಳು ಸಾಲದ ಕಂತನ್ನು ಕನಿಷ್ಟ ೬ ರಿಂದ ೭ ವರ್ಷದ ಅವಧಿಗೆ ವಿಸ್ತರಣೆ ಮಾಡಬೇಕು, ಕಾಫಿ ತೋಟ ಮರುನಿರ್ಮಾಣ, ಅಭಿವೃದ್ಧಿಗೆ ಅನುಕೂಲವಾಗುವಂತೆ ಎಲ್ಲಾ ಬೆಳೆಗಾರರಿಗೆ ಬ್ಯಾಂಕುಗಳು ಹೊಸದಾಗಿ ಸಾಲಸೌಲಭ್ಯವನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಾಫಿ ಬೆಳೆಯನ್ನು ಕೃಷಿಬೆಳೆ ಎಂದು ಪರಿಗಣಿಸಿ ಬೆಳೆ ಅಭಿವೃದ್ದಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಿದೆ. ತಮಿಳುನಾಡು, ಕೇರಳ ರಾಜ್ಯದಲ್ಲಿ ಇದನ್ನು ಕೃಷಿ ವ್ಯಾಪ್ತಿಗೆ ಸೇರ್ಪಡಿಸಿಲ್ಲ ಈ ಬಗ್ಗೆ ಗೊಂದಲಗಳಿದ್ದು ಇದು ಬಗೆಹರಿಯುವವರೆಗೂ ಸೆರ್ಫಾಸಿ ಕಾಯ್ದೆಯನ್ನು ಜಾರಿಗೊಳಿಸದಂತೆ ಒತ್ತಾಯಿಸಿದರು.
ಪ್ರಸ್ತುತ ಇರುವ ಕಾಫಿ ಕಾಯಿದೆಯನ್ನು ೧೯೪೨ ರಲ್ಲಿ ಜಾರಿಗೆ ತರಲಾಗಿದೆ. ಇದು ಈಗ ಅನಗತ್ಯವೆನಿಸುವ ಮತ್ತು ಕಾಫಿ ವ್ಯಾಪಾರಕ್ಕೆ ಅಡ್ಡಿಯಾಗಿರುವ ಅನೇಕ ನಿಬಂಧನೆಗಳನ್ನು ಹೊಂದಿದೆ. ಆದ್ದರಿಂದ, ಈ ಕಾನೂನಿನ ನಿಬಂಧನೆಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಹಾಗೂ ನಿಬಂಧಿತ ಮತ್ತು ನಿಯಂತ್ರಕ ನಿಬಂಧನೆಗಳನ್ನು ತೆಗೆದುಹಾಕಲು ಮತ್ತು ಕಾಫಿ ವಲಯದ ಪ್ರಸ್ತುತ ಅಗತ್ಯಗಳಿಗೆ ಸರಿಹೊಂದುವ ಮತ್ತು ಬೆಳವಣಿಗೆಗೆ ಪೂರಕವಾಗುವ ಸರಳ ಕಾಯಿದೆಯನ್ನು ರೂಪಿಸಬೇಕಿದೆ ಎಂದರು.
ಅಂತಾರಾಷ್ಟ್ರೀಯ ಸರಕು ದರಗಳ ಹೆಚ್ಚಳದಿಂದಾಗಿ, ಭಾರತೀಯ ಕೃಷಿ-ರಫ್ತುಗಳು ಹಲವಾರು ಸ್ಥಳಗಳಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಸಾರಿಗೆ ಮತ್ತು ಮಾರುಕಟ್ಟೆ ನೆರವು ಯೋಜನೆ (ಟಿಎಂಎ) ಅಡಿಯಲ್ಲಿ ಕೃಷಿ-ರಫ್ತುದಾರರಿಗೆ ಹೆಚ್ಚಿನ ನೆರವು ನೀಡಬೇಕು. ಕೃಷಿ ರಫ್ತಿಗೆ ಸಹಾಯ ಮಾಡಲು ಹಾಗೂ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಟಿಎಂಎ ಯೋಜನೆಯಡಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕಾಫಿ ಮಂಡಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರ ಭೇಟಿಗಳು, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

























Discussion about this post