ಬೆಂಗಳೂರು: 20 ತಿಂಗಳುಗಳ ಬಳಿಕ ಪುಟಾಣಿ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳು ತೆರೆದುಕೊಳ್ಳುತ್ತಿವೆ. ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳನ್ನು ಪುನರ್ ಪ್ರಾರಂಭಿಸಲು ಸರಕಾರ ಆದೇಶ ಹೊರಡಿಸಿದೆ.
ಕೋವಿಡ್-19ರ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಫಲಾನುಭವಿಗಳು ಬರುವುದನ್ನು ನಿರ್ಬಂಧಿಸಲಾಗಿತ್ತು. ಫಲಾನುಭವಿಗಳ ಮನೆಗೆ ಪೂರಕ ಪೌಷ್ಟಿಕ ಆಹಾರ ವಿತರಿಸಲಾಗುತ್ತಿತ್ತು. ಇದೀಗ ಅಂಗನವಾಡಿ ಕೇಂದ್ರಗಳನ್ನು ಪುನರ್ ಪ್ರಾರಂಭಿಸಲು ಮಾರ್ಗಸೂಚಿ ಹೊರಡಿಸಲಾಗಿದೆ.
ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯು ಎರಡು ಡೋಸ್ ಲಸಿಕೆ ಪಡೆದಿರಬೇಕು. ಈ ಬಗ್ಗೆ ಉಪನಿರ್ದೇಶಕರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.
ಅಂಗನವಾಡಿ ಕೇಂದ್ರದ ಒಳ ಆವರಣ ಮತ್ತು ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಬೇಕು. ಅಂಗನವಾಡಿ ಕೇಂದ್ರದಲ್ಲಿನ ಪಾಕೋಪಕರಣ, ಮಕ್ಕಳು ಕುಳಿತುಕೊಳ್ಳಲು ಉಪಯೋಗಿಸಿದ ಜಮಖಾನ/ ಡೆಸ್ಕ್ ಕುರ್ಚಿ/ ಆಟಿಕೆ ಸಾಮಾನುಗಳು ಮುಂತಾದವುಗಳನ್ನು ಅಂಗನವಾಡಿ ಪ್ರಾರಂಭದ ಹಿಂದಿನ ದಿನಗಳಲ್ಲಿ ಶುಚಿಗೊಳಿಸಬೇಕು. ಅಂಗನವಾಡಿ ಕೇಂದ್ರದ ಕಿಟಕಿ ಬಾಗಿಲುಗಳನ್ನು ತೆರೆಯಬೇಕು.
ಶೌಚಾಲಯ, ಅಂಗನವಾಡಿಯ ನೆಲ, ಗೋಡೆ, ಕಿಟಕಿ, ಬಾಗಿಲು ಮುಂತಾದವುಗಳನ್ನು ಸೋಪಿನ ದ್ರಾವಣದಲ್ಲಿ ಸ್ವಚ್ಛಗೊಳಿಸಬೇಕು. ಅಂಗನವಾಡಿ ಕೇಂದ್ರದಲ್ಲಿ ಪೂರಕ ಪೌಷ್ಟಿಕ ಆಹಾರ ತಯಾರಿಸುವ ಎಲ್ಲಾ ಪಾತ್ರೆ /ಲೋಟ / ಕುಕ್ಕರ್ ಗಳನ್ನು ಸ್ವಚ್ಛಗೊಳಿಸಬೇಕು.
ನೀರು ಶೇಖರಣೆಯ ವಾಟರ್ ಫಿಲ್ಟರ್, ಟ್ಯಾಂಕ್, ಸಂಪು ಇವುಗಳಲ್ಲಿರುವ ನೀರನ್ನು ಹೊರಚೆಲ್ಲಿ ಸ್ವಚ್ಛಗೊಳಿಸಬೇಕು.
ಅಂಗನವಾಡಿ ಕೇಂದ್ರದಲ್ಲಿ ಹಾಜರಾಗುವ ಎಲ್ಲರಿಗೂ ಕೈತೊಳೆಯಲು ಸೋಪು ಇರುವಂತೆ ನೋಡಿಕೊಳ್ಳಬೇಕು.
ಎಲ್ಲಾ ಮಕ್ಕಳು ಅಂಗನವಾಡಿಯಲ್ಲಿರುವ ಸಮಯದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಕೈತೊಳೆಯುವಂತೆ ನೋಡಿಕೊಳ್ಳಬೇಕು.
ಅಂಗನವಾಡಿಗೆ ಹಾಜರಾಗುವ ಪ್ರತಿ ಮಗವಿನ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಪ್ರಸ್ತುತ ಅಂಗನವಾಡಿ ಕೇಂದ್ರವನ್ನು ಪೂರ್ಣ ಪ್ರಮಾಣದಲ್ಲಿ ತೆರೆಯದೇ ಇರುವುದರಿಂದ ಮುಂದಿನ ಸೂಚನೆಯವರೆಗೆ ಪೂರಕ ಪೌಷ್ಟಿಕ ಆಹಾರವನ್ನು / ಆಹಾರ ಪದಾರ್ಥಗಳನ್ನು ಮನೆಗೆ ನೀಡುವುದನ್ನು ಮುಂದುವರೆಸಬೇಕು.
15 ದಿನಗಳ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪೂರಕ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕೇಂದ್ರದಲ್ಲಿಯೇ ನೀಡಲು ಸೂಚಿಸಲಾಗುವುದು. ಕೇಂದ್ರ ಕಚೇರಿಯ ಸೂಚನೆ ನಂತರ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಪೂರಕ ಪೌಷ್ಟಿಕ ಆಹಾರ, ಬಿಸಿಯೂಟ ಬಿಸಿಹಾಲು, ಬೇಯಿಸಿದ ಮೊಟ್ಟೆಯನ್ನು ನೀಡಲು ಕ್ರಮ ವಹಿಸುವುದು. ಆಹಾರ ವಿತರಣೆ ಸಮಯದಲ್ಲಿ ಗುಂಪು ಸೇರದಂತೆ ನೋಡಿಕೊಳ್ಳುವುದು.
ಪೋಷಕರು / ತಂದೆ ತಾಯಿಯರಿಗೆ ಸಂಬಂಧಿಸಿದ ಆರೋಗ್ಯ ಶಿಕ್ಷಣದ ಪರಿಕರಗಳನ್ನು ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಬೇಕು. ಹಿರಿಯ ನಾಗರಿಕರು ಅಂಗನವಾಡಿ ಕೇಂದ್ರಕ್ಕೆ ಬರದಂತೆ ನೋಡಿಕೊಳ್ಳಬೇಕು. ಅಂಗನವಾಡಿ ಪ್ರಾರಂಭವಾಗುವ ದಿನದ ಮೊದಲು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು 72 ತಾಸು ಮೊದಲು ಕಡ್ಡಾಯವಾಗಿ ಕೋವಿಡ್ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು.
ಅಂಗನವಾಡಿ ಕೇಂದ್ರದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಆಗಾಗ ಕೈಗಳನ್ನು ಸೋಪಿನಿಂದ ಅಥವಾ ಹ್ಯಾಂಡ್ ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಬೇಕು. ರೋಗ ಲಕ್ಷಣಗಳಾದ ಜ್ವರ, ಕೆಮ್ಮು ನೆಗಡಿ, ಗಂಟಲುನೋವು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಕೆಲಸಕ್ಕೆ ಹಾಜರಾಗಬಾರದು.
ಕೂಡಲೇ ವೈದ್ಯಕೀಯ ಸಲಹೆ ಪಡೆಯಬೇಕು. ಆಹಾರ ತಯಾರಿಸುವವರು ಮಾಸ್ಕ್ / ಹೆಡ್ ಕ್ಯಾಪ್ ಮತ್ತು ಏಪ್ರನ್ ಧರಿಸಬೇಕು. ಮಾಸ್ಕ್ ಬಾಯಿ ಮತ್ತು ಮೂಗನ್ನು ಸರಿಯಾಗಿ ಮುಚ್ಚಿರಬೇಕು. ಪ್ರತಿ ಮಗುವಿನ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಸಾಂಕ್ರಾಮಿಕ ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲುನೋವು ಮತ್ತು ಉಸಿರಾಟದ ತೊಂದರೆಯಿಂದ ಮಕ್ಕಳು ಬಳಲುತ್ತಿದ್ದರೆ ಅಂತಹ ಮಕ್ಕಳನ್ನು ಇತರೆ ಮಕ್ಕಳಿಂದ ಬೇರ್ಪಡಿಸಬೇಕು ಮತ್ತು ಇಂತಹ ಮಕ್ಕಳನ್ನು ಪೋಷಕರು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ಸಲಹೆ ಪಡೆಯುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಸಂದರ್ಶಕರಿಗೆ ಪ್ರವೇಶ ನಿರ್ಬಂಧಿಸಬೇಕು. ಹಾಲಿನ ಪ್ಯಾಕೆಟ್, ತರಕಾರಿ, ದಿನಸಿ ಪ್ಯಾಕೆಟ್ಗಳನ್ನು ಹರಿಯುವ ನೀರಿನಿಂದ ಸ್ವಚ್ಛಗೊಳಿಸಬೇಕು. ತಯಾರಿಸಿದ ಆಹಾರವನ್ನು ಸ್ವಚ್ಛ ಮತ್ತು ಮುಚ್ಚಿದ ಪಾತ್ರೆಯಲ್ಲಿ ಸಂಗ್ರಹಿಸಬೇಕು.
ಪಾತ್ರೆಗಳನ್ನು ಡಿಟರ್ಜೆಂಟ್ನಿಂದ ಚೆನ್ನಾಗಿ ತೊಳೆಯಬೇಕು.
ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ / ಆರೋಗ್ಯ ತಪಾಸಣೆ ನಡೆಸುವಾಗ ಹೊರಡಿಸಿದ ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: Guideline: ರಾಜ್ಯದ ಜಿಮ್ಗಳಿಗೆ ಮಾರ್ಗಸೂಚಿ ನಿಗದಿ
ಇದನ್ನೂ ಓದಿ: e Paper – November 1, 2021

























Discussion about this post