ಚಿಕ್ಕಮಗಳೂರು: ಹಣ್ಣು, ತರಕಾರಿ ಇನ್ನಿತರೆ ಉತ್ಪನ್ನಗಳನ್ನು ಸಂರಕ್ಷಿಸಿಡಲು ನಮ್ಮ ಜಿಲ್ಲೆಯ ಕಡೂರು ಮತ್ತು ತರೀಕೆರೆ ತಾಲ್ಲುಕುಗಳಲ್ಲಿ ವೇರ್ ಹೌಸ್ ಮತ್ತು ಕೋಲ್ಡ್ ಸ್ಟೋರೇಜ್ಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಸಂಬಂಧ ಎಲ್ಲೆಲ್ಲಿ ಇದರ ಅಗತ್ಯ ಇದೆ ಎನ್ನುವುದರ ಕುರಿತು ವರದಿ ನೀಡುವಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕೃಷಿ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಕೊಳೆಯಲ್ಪಡುವಂತಹ ಬೆಳೆಗಳನ್ನು ಸಂರಕ್ಷಿಸಿಡುವ ಸಲುವಾಗಿ ಇಂತಹ ಬೆಳೆ ಬೆಳೆಯುವ ಕಡೆ ವೇರ್ ಹೌಸ್ ಮತ್ತು ಕೋಲ್ಡ್ ಸ್ಟೋರೇಜ್ಗಳನ್ನು ಮಾಡಲು ಕೇಂದ್ರ ಆದ್ಯತೆ ಕೊಡುತ್ತಿದೆ ಎಂದರು.
ದೇಶದಲ್ಲಿ ಕಳೆದ ಒಂದು ವರ್ಷದಿಂದ ಆಹಾರ ಉತ್ಪಾಧನೆ ಹೆಚ್ಚಾಗಿದೆ. ನಮ್ಮ ದೇಶದ ಜನರಿಗೆ ಆಗಿ ಉಳಿಯುತ್ತಿದೆ. ಸುಮಾರು ೩೦೫ ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ ಮತ್ತು ೩೨೬ ಮಿಲಿಯನ್ ಮೆಟ್ರಿಕ್ ಟನ್ ತರಕಾರಿ ಮತ್ತು ಹಣ್ಣುಗಳನ್ನು ಕಳೆದ ಒಂದು ವರ್ಷದಲ್ಲಿ ಬೆಳೆಯಲಾಗಿದೆ. ಈ ವರ್ಷ ಅದು ಇನ್ನೂ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು.
ಅಷ್ಟು ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯ ಬೆಳೆದರೆ ಸಹಜವಾಗಿ ಸಾಕಷ್ಟು ಹಾಳಾಗುತ್ತದೆ. ನಾವು ಅದನ್ನು ಮಾರ್ಕೆಟಿಂಗ್ ಮಾಡಲೇ ಬೇಕಿರುವುದರಿಂದ ಆಹಾರ ಸಂಸ್ಕರಣೆ ಮತ್ತು ರಫ್ತಿಗೆ ಕೇಂದ್ರ ಸರ್ಕಾರ ಆಧ್ಯತೆ ನೀಡುತ್ತಿದೆ. ಈ ವರ್ಷವೇ ಸಾಕಷ್ಟು ತಾಜಾ ಹಣ್ಣು ಮತ್ತು ಸಂಸ್ಕರಿತ ಆಹಾರ ಪಾದಾರ್ಥವನ್ನು ರಫ್ತು ಮಾಡಲಾಗಿದೆ ಎಂದರು.
ಹೆಚ್ಚಿನ ವೇಳೆ ರಫ್ತು ಮಾಡಲು ಸಾಧ್ಯವಾಗದಿದ್ದಾಗ ಅದನ್ನು ಸಂಸ್ಕರಣೆ ಮಾಡಿ ಸಂರಕ್ಷಿಸಿಡಬೇಕಾಗುತ್ತದೆ. ಅದಕ್ಕಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿ ಕೃಷಿ ಇಲಾಖೆ ಮತ್ತು ಅಪೇಡ ಸಂಸ್ಥೆಯ ಸಭೆಗಳನ್ನು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಸಭೆ ನಡೆದಿದೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತುದಾರರು ಅದರಲ್ಲಿ ಭಾಗವಹಿಸಿದ್ದರು.
ಗುಣಮಟ್ಟದ ಆಹಾರ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಏನು ಮಾಡಬಹುದು ಎನ್ನುವ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ ಎಂದರು. ಇದಕ್ಕಾಗಿ ಉತ್ಪಾದನೆಗೆ ಮೊದಲೇ ರೈತರಿಗೆ ಅಗತ್ಯ ತರಬೇತಿ, ಮಾರ್ಗದರ್ಶನಗಳನ್ನು ನೀಡಬೇಕು. ಆಂತರಿಕ ಮತ್ತು ಬಾಹ್ಯ ಮಾರುಕಟ್ಟೆಯನ್ನು ಬಲಗೊಳಿಸಲು ಆಧ್ಯತೆ ನೀಡಲಾಗುತ್ತಿದೆ. ವಿದೇಶಿ ಪ್ರತಿನಿಧಿಗಳ ಜೊತೆ ಸಮಾಲೋಚಿಸಲಾಗುತ್ತಿದೆ. ಯಾವ ಯಾವ ದೇಶಕ್ಕೆ ಯಾವ ಆಹಾರ ಪದಾರ್ಥ ಬೇಕು. ಅಲ್ಲಿಯ ಅಗತ್ಯತೆ ಏನು ಎನ್ನುವುದನ್ನು ಪಟ್ಟಿ ಮಾಡಿ ಅದರ ಆಧಾರದಲ್ಲಿ ಅಗ್ರಿ ಮಾರ್ಕೆಟಿಂಗ್ ಹಾಗೂ ಅಗ್ರಿ ಬ್ಯುಸಿನೆಸ್ಗಳನ್ನು ಉತ್ತೇಜಿಸಬೇಕು ಎನ್ನುವುದು ನಮ್ಮ ಆಧ್ಯತೆ ಎಂದರು.
ಈ ಬಾರಿ ನಮ್ಮ ಆಧ್ಯತೆ ಎಣ್ಣೆಕಾಳುಗಳ ಮೇಲೆ. ಆಹಾರ ಧಾನ್ಯಗಳನ್ನು ಅಗತ್ಯಕ್ಕಿಂತ ಹೆಚ್ಚು ಬೆಳೆಯುತ್ತಿದ್ದರೂ ಎಣ್ಣೆ ಕಾಳುಗಳನ್ನು ಶೇ.೭೦ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ದೊಡ್ಡ ಪ್ರಮಾಣದ ವಿದೇಶೀ ವಿನಿಮಯ ಇದರಿಂದ ಹೊರಕ್ಕೆ ಹೋಗುತ್ತಿದೆ. ಅದಕ್ಕಾಗಿ ಎಣ್ಣೆ ಕಾಳುಗಳಿಗೆ ಆಧ್ಯತೆ ಕೊಟ್ಟು ಸೂರ್ಯಕಾಂತಿ, ನೆಲಗಡಲೆ, ಸೋಯಾಬೀನ್, ಸಾಸಿವೆ ಬೆಳೆಗೆ ಉತ್ತೇಜನ ನೀಡಲು ತೀರ್ಮಾನಿಸಿದೆ ಎಂದರು.
ಇದಕ್ಕಾಗಿ ಉಚಿತ ಎಣ್ಣೆಕಾಳು ಬೀಜಗಳ ಕಿಟ್ಗಳನ್ನು ಕೊಡಲಾಗುತ್ತಿದೆ. ಸಹಾಯಧನ ಗಳನ್ನು ನೀಡಲಾಗುತ್ತಿದೆ. ೧೦ ಸಾವಿರ ರೈತ ಉತ್ಪಾಧಕ ಸಂಘಗಳನ್ನು ರಚಿಸುವುದು, ಎಣ್ಣೆಕಾಳುಗಳ ಬೆಳೆಗೆ ಉತ್ತೇಜನ ನೀಡುವುದು ನಮ್ಮ ಗುರಿ ಎಂದು ಹೇಳಿದರು.
ಕೇಂದ್ರದ ಕೃಷಿ ಬಜೆಟ್ ಸಹ ಹೆಚ್ಚಾಗುತ್ತಲೇ ಇದೆ. ೨೦೧೩-೧೪ ರ ಯುಪಿಎ ಸರ್ಕಾರ ಇದ್ದಾಗ ಕೃಷಿಗೆ ಇದ್ದದ್ದು ೨೩ ಸಾವಿರ ಕೋಟಿ ರೂ. ಈಗ ದೇಶದ ಬಜೆಟ್ ೧ ಲಕ್ಷ ೨೩ ಸಾವಿರ ಕೋಟಿ ರೂ. ಕೃಷಿಗೆ ೮೫೦೦ ಕೋಟಿ ರೂ. ಕೃಷಿ ಸಂಶೋಧನೆಗೆ ಮೀಸಲಿಡಲಾಗುತ್ತಿದೆ. ಕೇವಲ ೬ ವರ್ಷದಲ್ಲಿ ಇಷ್ಟೊಂದು ಅಂತರವಿದೆ. ಇದೆಲ್ಲವೂ ಕೂಡ ರೈತರಿಗೆ ಹೋಗುತ್ತಿದೆ ಎಂದರು.
ಸುಮಾರು ೧೧ ಕೋಟಿ ರೈತರಿಗೆ ೧ಲಕ್ಷ ೫೮ ಸಾವಿರ ಕೋಟಿ ರೂ. ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ಹಾಕಲಾಗಿದೆ. ಫಸಲ್ ಭೀಮಾ ಯೋಜನೆಯನ್ನು ಸರಳೀಕರಣಗೊಳಿಸಿದ್ದೇವೆ. ಈ ರೀತಿ ಹಲವಾರು ಯೋಜನೆಗಳು ನಡೆಯುತ್ತಿವೆ ಎಂದರು.

























Discussion about this post