ಬೆಂಗಳೂರು: ಭಾರತೀಯ ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಇಂಥವರೇ ರಾಜಕೀಯಕ್ಕೆ ಬರಬೇಕು ಎಂದು ಗೆರೆ ಎಳೆಯಲಾಗಿದೆಯಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯನ್ನು ನೇರವಾಗಿ ಪ್ರಶ್ನೆ ಮಾಡಿದರು.
ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ, ಪಕ್ಷವು ದೇವೇಗೌಡರ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂದು ಟ್ವೀಟರ್ ನಲ್ಲಿ ಬಿಜೆಪಿ ಮಾಡಿದ್ದ ಟೀಕೆಗೆ ಮಾಧ್ಯಮಗೋಷ್ಟಿಯಲ್ಲಿ ತಿರುಗೇಟು ಕೊಟ್ಟ ಅವರು, “ಬಿಜೆಪಿ ಕುಟುಂಬ ರಾಜಕಾರಣದಲ್ಲಿ ತೊಯ್ದಾಡುತ್ತಿದೆ. ತನ್ನ ಹುಳುಕನ್ನು ಮರೆಮಾಚಲು ಜೆಡಿಎಸ್ ಮೇಲೆ ಕೆಸರು ಎರಚುತ್ತಿದೆ” ಎಂದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ನಾವೂ ಒಂದು ಪಟ್ಟಿ ಕೊಟ್ಟಿದ್ದೇವೆ. ಇನ್ನು ಬೇಕಾದಷ್ಟು ಪಟ್ಟಿಗಳಿವೆ. ಹೇಳುತ್ತಾ ಹೋದ್ದರೆ ಅದು ಮುಗಿಯದ ಕಥೆ ಆಗುತ್ತದೆ. ಸುಮ್ಮನೆ ನಮ್ಮ ಕುಟುಂಬದ ತಂಟೆಗೆ ಬರುವುದು ಬೇಡ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ರಾಜಕಾರಣಕ್ಕೆ ಬರಬಹುದು. ಎಲ್ಲ ವೃತ್ತಿಗಳಲ್ಲೂ ಇರುವಂತೆ ರಾಜಕೀಯದಲ್ಲೂ ಕುಟುಂಬ ಸದಸ್ಯರು ರಾಜಕಾರಣಕ್ಕೆ ಬರುವುದು ಹೊಸತೇನಲ್ಲ. ಚಿತ್ರರಂಗ, ವೈದ್ಯ ಕ್ಷೇತ್ರದಲ್ಲೂ ಇದೆಯಲ್ಲವೇ? ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಬಿಜೆಪಿ ನಿರ್ದಿಷ್ಟವಾಗಿ ನಮ್ಮ ಕುಟುಂಬ ಮತ್ತು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಏಕೆ? ಸುಖಾಸುಮ್ಮನೆ ಟ್ವೀಟ್ ಮಾಡುವುದು, ಮಾತನಾಡುವುದನ್ನು ನಿಲ್ಲಿಸದಿದ್ದರೆ ನಾವು ಕೂಡ ಅದೇ ಧಾಟಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ದೇವೇಗೌಡರು ಸುದೀರ್ಘ ಅವಧಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ನಿಜ. ನಾಳೆ ಯಾರಾದರೂ ಬಂದರೂ ಅವರಿಗೆ ಆ ಪದವಿ ಬಿಟ್ಟುಕೊಡಲು ಅವರು ಸಿದ್ಧರಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ. ನಮ್ಮ ವೈಯಕ್ತಿಕ ವರ್ಚಸ್ಸಿನಲ್ಲೇ ಪಕ್ಷ ನಡೆಯಬೇಕು ಎಂದ ಅವರು; ದೇವೇಗೌಡರ ಕಾಲದಲ್ಲಿ ಬಿಟ್ ಕಾಯಿನ್ ಹಗರಣ ನಡೆದಿತ್ತಾ? ಹೋಗಲಿ, ನಾನು ಸಿಎಂ ಆಗಿದ್ದಾಗ ಯಾವುದಾದರೂ ಹಗರಣ ಆಗಿತ್ತಾ? ಅದ್ಯಾವುದೋ 150 ಕೋಟಿ ರೂಪಾಯಿ ಆರೋಪ ಹೊರಿಸಿದ್ದರು. ಆ ಸುಳ್ಳು ಆರೋಪ ಎಲ್ಲಿಗೆ ಹೋಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಬಿಜೆಪಿಗೆ ಅವರು ಟಾಂಗ್ ಕೊಟ್ಟರು.
ನಮ್ಮ ವೆಬ್ ತಾಣದಲ್ಲಿ ರಾಜ್ಯಾಧ್ಯಕ್ಷರ ಭಾವಚಿತ್ರ ಇಲ್ಲ ಎನ್ನುವ ಸುಳ್ಳನ್ನು ಬಿಜೆಪಿ ಹೇಳಿದೆ. ಮೊದಲು ನನ್ನ ಮತ್ತು ದೇವೇಗೌಡರ ಚಿತ್ರಗಳಿದ್ದು, ಹೆ ಚ್.ಕೆ. ಕುಮಾರಸ್ವಾಮಿ ಅವರ ಚಿತ್ರವೂ ಇದೆ. ಬಿಜೆಪಿ ವೆಬ್ ತಾಣಗಳಲ್ಲಿ ಮೊದಲು ಮೋದಿ ಅವರ ಚಿತ್ರ ಬಂದು ನಂತರ ಇತರೆ ನಾಯಕರ ಚಿತ್ರಗಳನ್ನು ಹಾಕಿಲ್ಲವೇ? ಬೇರೆಯವರ ತಟ್ಟೆಯತ್ತ ಬಿಜೆಪಿ ಕಣ್ಣೇಕೆ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ರಾಜಕಾರಣದಲ್ಲಿ ನಿವೃತ್ತಿ ಎಂಬುದಿಲ್ಲ
Discussion about this post