ನವೆಂಬರ್ 26ರ ಸಂವಿಧಾನ ದಿನವನ್ನು ಹಲವು ಗಣ್ಯರು ಸ್ಮರಿಸಿಕೊಂಡಿದ್ದಾರೆ. ಸಂವಿಧಾನ ನಿರ್ಮಾತೃರ ಕೊಡುಗೆಗಳನ್ನು ನೆನೆಸಿಕೊಂಡು ಸದಾಶಯಗಳನ್ನು ಹಂಚಿಕೊಂಡಿದ್ದಾರೆ.
1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢನಿಶ್ಚಯದೊಂದಿಗೆ ನಮ್ಮ ಎಲ್ಲ ಸಂವಿಧಾನ ಕರ್ತೃಗಳನ್ನು ಸ್ಮರಿಸೋಣ, ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪವನ್ನು ಪುನರುಚ್ಛರಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿದ್ದಾರೆ.
ಸಂವಿಧಾನವೇ ನಮ್ಮ ರಾಷ್ಟ್ರಧರ್ಮ. ಪ್ರತಿಯೊಬ್ಬ ಭಾರತೀಯನ ಸ್ವಾತಂತ್ರ್ಯ, ಹಕ್ಕು, ಘನತೆಯನ್ನು ಸಂವಿಧಾನ ರಕ್ಷಿಸುತ್ತದೆ. ಸಮಾನತೆಯೊಂದಿಗೆ ನಮ್ಮ ವಿಚಾರ, ಅಭಿವ್ಯಕ್ತಿ, ಶ್ರದ್ಧೆ, ಉಪಾಸನೆಯ ಸ್ವಾತಂತ್ರ್ಯವೂ ಸಂವಿಧಾನದತ್ತವಾಗಿದ್ದು, ಇದರೊಂದಿಗೆ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಕರ್ತವ್ಯಗಳನ್ನೂ ನಾವು ನಿರ್ವಹಿಸೋಣ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂ ಮಾಡಿದ್ದಾರೆ.
ಸ್ವಾತಂತ್ರ್ಯ, ಸಮಾನತೆ ಮೊದಲಾದ ಹಕ್ಕುಗಳನ್ನು ಜನರಿಗೆ ನೀಡಿ ಉತ್ತಮ ಜೀವನ ಹೊಂದಲು ನೆರವಾಗುವ ಶ್ರೇಷ್ಠ ಭಾರತೀಯ ಸಂವಿಧಾನ ಅಂಗೀಕೃತಗೊಂಡ ದಿನದ ಹಾರ್ದಿಕ ಶುಭಾಶಯಗಳು. ಸಂವಿಧಾನದ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಓದಿ, ಪರಿಪಾಲಿಸುವ ಮೂಲಕ ಸುಭದ್ರ ಸಮಾಜ, ದೇಶ ನಿರ್ಮಾಣಕ್ಕೆ ಮುಂದಾಗೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.
ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅದನ್ನು ಜಾರಿಗೊಳಿಸುವವರು ಒಳ್ಳೆಯವರಲ್ಲದಿದ್ದರೆ ಅದು ಕೆಟ್ಟದ್ದೆಂದು ಸಾಬೀತಾಗುತ್ತದೆ.
ಸಂವಿಧಾನವು ಎಷ್ಟೇ ಕೆಟ್ಟದಾಗಿದ್ದರೂ, ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿದ್ದರೆ, ಅದು ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಕೂ ಮಾಡಿದ್ದಾರೆ.
Discussion about this post