ಮಡಿಕೇರಿ: ದುಬಾರೆ ಅರಣ್ಯ ಪ್ರದೇಶದ ನಡುವೆ ಪ್ರಜ್ಞಾ ಚೌಟ ಅವರಿಗೆ ಸೇರಿದ ‘ಆನೆ ಮನೆ ಫೌಂಡೇಷನ್’ ವಶದಲ್ಲಿದ್ದ 8 ಸಾಕಾನೆಗಳನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿದೆ.
ಹಿರಿಯ ರಂಗಕರ್ಮಿ ಡಿ.ಕೆ.ಚೌಟ ಅವರ ಪುತ್ರಿ ಪ್ರಜ್ಞಾ ಚೌಟ ಅವರು ಸರ್ಕಾರದಿಂದ ಅನುಮತಿ ಪಡೆದು ಕಾಡಿನ ಮಧ್ಯೆ ಆನೆಗಳನ್ನು ಸಾಕುತ್ತಿದ್ದರು. ಆಕರ್ಷಕ ಆನೆ ಮನೆಯನ್ನು ನಿರ್ಮಿಸಿದ್ದರು. ಆದರೆ ಈ ಆನೆಗಳು ಸುತ್ತಮುತ್ತಲ ರೈತರ ಕೃಷಿ ಭೂಮಿಗೆ ಲಗ್ಗೆ ಹಾಕಿ ಹಾನಿ ಉಂಟು ಮಾಡುತ್ತಿದ್ದುದರಿಂದ ಈ ಸಾಕಾನೆಗಳಿಗೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು.
ಈ ಸಾಕಾನೆಗಳಿಂದ ಉಂಟಾಗುತ್ತಿದ್ದ ಸಮಸ್ಯೆ ಕುರಿತು ಇಲಾಖೆಯು ಸರ್ಕಾರಕ್ಕೆ ವರದಿ ನೀಡಿದ ಹಿನ್ನೆಲೆಯಲ್ಲಿ ಫೌಂಡೇಷನ್ ವಶದಲ್ಲಿದ್ದ ಎಲ್ಲಾ ಸಾಕಾನೆಗಳನ್ನು ಅರಣ್ಯ ಇಲಾಖೆಯವ ವಶಕ್ಕೆ ಪಡೆದು ಸ್ಥಳಾಂತರ ಮಾಡುವಂತೆ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಹೆಣ್ಣಾನೆಗಳಾದ ಹೀರಣ್ಯ (43), ಮಾಲಾದೇವಿ (34), ಪೂಜಾ (8 ), ಕಮಲಿ (4), ಕನ್ನಿಕಾ(2), ಹೀರಣ್ಯ (2 ತಿಂಗಳು) ಹಾಗೂ ಗಂಡಾನೆಗಳಾದ ಧರ್ಮ (12), ಜಗ (7) ಸೇರಿದಂತೆ ಎಂಟು ಆನೆಗಳನ್ನು ಬಂಡೀಪುರದ ರಾಮಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಮಾರ್ಗದರ್ಶನಲ್ಲಿ ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಜೆ.ಅನನ್ಯ ಕುಮಾರ್, ಡಿಆರ್‌ಎಫ್‌ಒಗಳಾದ ಕೆ.ಪಿ.ರಂಜನ್, ಅನಿಲ್ ಡಿಸೋಜ, ಮಾವುತರಾದ ಜೆ.ಕೆ.ಡೋಬಿ, ಜೆ.ಆರ್.ಚಿನ್ನಪ್ಪ, ಜೆ.ಎಸ್.ಅಣ್ಣಯ್ಯ, ದೊರೆಯಪ್ಪ, ಕಾವಾಡಿಗರಾದ ನಯಾಜ್ ಪಾಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Eight privately owned elephants evacuated from Madikeri

























Discussion about this post