ಗದಗ: ಮುಷ್ಕರದಲ್ಲಿ ಪಾಲ್ಗೊಂಡು ಕೆಲಸದಿಂದ ವಜಾಗೊಂಡಿದ್ದ ಕರ್ನಾಟಕ ಸಾರಿಗೆ ಸಿಬ್ಬಂದಿಯನ್ನು ಮುಂದಿನ ಒಂದು ತಿಂಗಳಲ್ಲಿ ಮರು ನಿಯುಕ್ತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಗದಗ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ 8 ತಿಂಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ, ಮಾನವೀಯತೆ ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ ವಜಾಗೊಂಡಿರುವ ಸಿಬ್ಬಂದಿಯನ್ನು ನಾಲ್ಕು ವಾರದೊಳಗೆ ಸೇವೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಮರು ನಿಯುಕ್ತಿ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ಕು ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ವಜಾಗೊಂಡಿರುವ ಸಿಬ್ಬಂದಿ ಕೋರ್ಟ್ ಮೆಟ್ಟಿಲೇರಿರುವ ಕಾರಣ ಕೆಲ ಕಾನೂನಿನ ತೊಡಕು ಉಂಟಾಗಿದೆ. ಹೀಗಾಗಿ ಲೋಕ ಅದಾಲತ್ ಮೂಲಕ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಶ್ರೀರಾಮುಲು, ಇನ್ಮುಂದೆ ಸಿಬ್ಬಂದಿ ಇಂತಹ ಹೋರಾಟಗಳಲ್ಲಿ ಪಾಲ್ಗೊಳ್ಳಬಾರದು. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
Transport staff
Discussion about this post