ಬೆಂಗಳೂರು: ರಾಜ್ಯದಲ್ಲಿ ಮೈ ಕೊರೆಯುವ ಚಳಿ ವಾತಾವರಣವಿದ್ದು, ಬೀದರ್ ಜಿಲ್ಲೆಯಲ್ಲಿ ನಿನ್ನೆ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಅಕಾಲಿಕ ಮಳೆಯಿಂದಾಗಿ ತೀವ್ರ ಚಳಿ ತಡವಾಗಿ ಆರಂಭವಾಗಿದ್ದು,ಉತ್ತರ ಮತ್ತು ದಕ್ಷಿಣ ಒಳಭಾಗದ ಬಯಲು ಪ್ರದೇಶಗಳಲ್ಲಿ ಪಾದರಸದ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಈ ಕಾರಣದಿಂದ ಚಳಿ ತೀವ್ರವಾಗಿದ್ದು, ಬೀದರ್‌ನಲ್ಲಿ ಮಂಗಳವಾರ 9.4 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. 85 ವರ್ಷಗಳಲ್ಲೇ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ.
ಸೋಮವಾರ 9.7 ಇದ್ದ ತಾಪಮಾನ ಒಂದೇ ದಿನಕ್ಕೆ ಮತ್ತಷ್ಟು ಇಳಿದಿದ್ದು, ಬೀದರ್ ಜನತೆ ಚಳಿಗೆ ತತ್ತರಿಸಿದ್ದಾರೆ.
1936 ರಲ್ಲಿ ಬೀದರ್‌ನಲ್ಲಿ ಕನಿಷ್ಠ 10 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ದಾಖಲಾಗಿತ್ತು. ಡಿ.20 ಮತ್ತು 21 ರಂದು ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಬೀದರ್ ಅಷ್ಟೇ ಅಲ್ಲ, ಉತ್ತರ ಮತ್ತು ದಕ್ಷಿಣದ ಬಯಲು ಪ್ರದೇಶದ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಕಡಿಮೆ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಂಗಳವಾರ ವಿಜಯಪುರದಲ್ಲಿ 10.4 ಡಿಗ್ರಿ, ಧಾರವಾಡದಲ್ಲಿ 10.8 ಡಿಗ್ರಿ ಮತ್ತು ದಾವಣಗೆರೆಯಲ್ಲಿ 10.9 ಡಿಗ್ರಿ ದಾಖಲಾಗಿದೆ. ಈ ಹವಾಮಾನ ಪರಿಸ್ಥಿತಿ ರಾಜ್ಯಾದ್ಯಂತ ಇನ್ನೂ ನಾಲ್ಕು ದಿನ ಮುಂದುವರಿಯುವ ಸಾಧ್ಯತೆ ಇದೆ. ಡಿಸೆಂಬರ್ ಎರಡನೇ ವಾರದಿಂದ ರಾಜಧಾನಿ ಬೆಂಗಳೂರು ಕೂಡ ಚಳಿಗೆ ನಲುಗಿದ್ದು, ಮಂಗಳವಾರ ಕನಿಷ್ಠ16 ಡಿಗ್ರಿ ತಾಪಮಾನ ದಾಖಲಾಗಿದೆ.
It’s bitterly cold
Discussion about this post