Health Tips: ಒಂದು ಹೆಣ್ಣಿನ ಸುಂದರ, ಅದ್ಭುತ ಕ್ಷಣಗಳ ಆರಂಭ ಅಂದ್ರೆ ಆಕೆ ಗರ್ಭಿಣಿಯಾಗುವ ಸಮಯ. ಮೊದಲ ತಿಂಗಳಿನಿಂದ ಹಿಡಿದು ಹೆರಿಗೆಯವರೆಗೂ ಆಕೆಯ ದೇಹದಲ್ಲಾಗುವ ಬದಲಾವಣೆಗಳನ್ನು ಆಕೆಯಷ್ಟೇ ಅನುಭವಿಸಬಲ್ಲಳು. ಅಂಥ ಅದ್ಭುತ ಕ್ಷಣಗಳನ್ನು ಅನುಭವಿಸಬೇಕಾದರೆ, ಗರ್ಭಿಣಿಯಾದ ಮೂರು ತಿಂಗಳವರೆಗೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಈ ಸಮಯದಲ್ಲಿ ಮಗು ತುಂಬಾ ನಾಜೂಕಾಗಿದ್ದು, ತಾಯಿಯಾಗುವವಳು ಕೆಲ ಕೆಲಸಗಳನ್ನು ಮಾಡಬಾರದು. ಹಾಗಾದ್ರೆ ಗರ್ಭಿಣಿಯರು ತಮಗೆ ಮೂರು ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ.
ಮೊದಲ ಬಾರಿ ಗರ್ಭ ಧರಿಸುವ ಹೆಣ್ಣು ಮಕ್ಕಳಿಗೆ ತಾನು ತಾಯಿಯಾಗುವ ಬಗ್ಗೆ ಸೂಚನೆ ಸಿಗುವುದೇ ಋತುಚಕ್ರದ ಮೂಲಕ. ಯಾಕಂದ್ರೆ ಎರಡನೇ ಬಾರಿ ಗರ್ಭಿಣಿಯಾಗುವಾಗ, ಆಕೆ ಎಚ್ಚೆತ್ತುಕೊಂಡು ಆದಷ್ಟು ಬೇಗ ಈ ಬಗ್ಗೆ ಸ್ಪಷ್ಟಪಡಿಸಿಕೊಳ್ಳುತ್ತಾಳೆ.
ಆದ್ರೆ ಮೊದಲನೇಯದಾಗಿ ಗರ್ಭಿಣಿಯಾಗುವವರಿಗೆ ಸಿಗುವ ಮೊದಲ ಸೂಚನೆ ಅಂದ್ರೆ ಋತುಚಕ್ರ ಆಗದೇ ಇರುವುದು. ಕೆಲವರಿಗೆ ಪಿಸಿಓಡಿ ಸಮಸ್ಯೆ ಇದ್ದರೆ ಸರಿಯಾಗಿ ಋತುಚಕ್ರವಾಗುವುದಿಲ್ಲ. ಹಾಗಾಗಿ ವಿವಾಹದ ಬಳಿಕ ನಿಮ್ಮ ಋತುಚಕ್ರ 40 ದಿನವಾದರೂ ಆಗದಿದ್ದಲ್ಲಿ ಆದಷ್ಟು ಬೇಗ ನೀವು ತಾಯಿಯಾಗುತ್ತೀದ್ದೀರಾ ಇಲ್ಲವಾ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ.
ಎಷ್ಟು ಬೇಗ ತಾಯಿಯಾಗುವುದನ್ನು ಗೊತ್ತು ಮಾಡಿಕೊಳ್ಳುತ್ತೀರೋ ಅಷ್ಟು ಉತ್ತಮ. ಯಾಕಂದ್ರೆ ಮುಟ್ಟಾಗಲಿಲ್ಲವೆಂದು ಕೆಲವರು, ಗುಳಿಗೆಗಳನ್ನು ಸೇವಿಸುವುದು, ಪಪ್ಪಾಯಿ, ಅನಾನಸ್ ತಿಂದು ಬೇಗ ಮುಟ್ಟಾಗುವಂತೆ ಮಾಡಿಕೊಳ್ಳುವುದೆಲ್ಲ ಮಾಡುತ್ತಾರೆ.
ಇದು ನಿಮ್ಮ ದೇಹಕ್ಕೆ ನೀವೇ ಕುತ್ತು ತಂದುಕೊಂಡಂತಾಗುತ್ತದೆ. ಹಾಗಾಗಿ 40 ದಿನವಾದರೂ ಮುಟ್ಟಾಗದಿದ್ದಲ್ಲಿ, ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಮೂಲಕ ಈ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ.
ಪ್ರೆಗ್ನೆನ್ಸಿ ಟೆಸ್ಟ್ ಕಿಟ್ನಲ್ಲಿ ಪಾಸಿಟಿವ್ ರಿಸಲ್ಟ್ ಬಂದಲ್ಲಿ ತಕ್ಷಣ ವೈದ್ಯರ ಬಳಿ ಹೋಗಿ ಚೆಕ್ಅಪ್ ಮಾಡಿಸಿಕೊಳ್ಳಿ. ಸ್ಕ್ಯಾನಿಂಗ್, ಬ್ಲಡ್ ಟೆಸ್ಟ್ ಸೇರಿ ಇತ್ಯಾದಿ ಟೆಸ್ಟ್ ಮಾಡಿದ ವೈದ್ಯರು ನಿಮಗೆ ಕೆಲ ಗುಳಿಗೆ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.
ಈ ಗುಳಿಗೆ ತೆಗೆದುಕೊಳ್ಳುವುದರ ಜೊತೆಗೆ, ಉತ್ತಮ ಆಹಾರ ತೆಗೆದುಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಮನೆಯ ಹಿರಿಯರ ಸಲಹೆಯಂತೆ ಮತ್ತು ವೈದ್ಯರ ಸಲಹೆಯಂತೆ ಆಹಾರ ಸೇವಿಸಿ.
ಇದರ ಜೊತೆಗೆ ಭಾರ ಎತ್ತುವುದು, ಕುಳಿತುಕೊಂಡು ಅಥವಾ ತುಂಬಾ ಹೊತ್ತು ನಿಂತುಕೊಂಡು ಬಟ್ಟೆ ತೊಳೆಯುವುದು, ಪಾತ್ರೆ ತೊಳೆಯುವುದು, ಮೆಟ್ಟಿಲು ಹತ್ತುವುದು, ಬೈಕ್, ಅಥವಾ ಯಾವುದೇ ವಾಹನದಲ್ಲಿ ಸ್ಪೀಡ್ ಆಗಿ ಚಲಿಸುವುದು, ಪದೇ ಪದೇ ಬಗ್ಗಿ ಕೆಲಸ ಮಾಡುವುದು, ಆಯಾಸವಾಗುವ ಕೆಲಸ ಮಾಡುವುದು, ಹೆಚ್ಚು ದೂರ ವಾಕಿಂಗ್ ಮಾಡುವುದು, ಓಡುವುದು, ಜಂಪ್ ಮಾಡುವುದು, ದೂರದ ಊರಿಗೆ ಹೋಗುವುದು ಇದನ್ನೆಲ್ಲ ಮಾಡಲೇಬಾರದು.
ಇದರ ಜೊತೆಗೆ, ಹೆಚ್ಚು ಮಾಾಂಸಾಹಾರ ಸೇವಿಸುವುದು, ಖಾರ ಖಾರವಾದ ಆಹಾರ ಸೇವನೆ, ಬಿಸಿ ಬಿಸಿ ನೀರಿನ ಸೇವನೆ ಅಥವಾ ಹೆಚ್ಚು ತಂಪಾದ ನೀರಿನ ಸೇವನೆ, ಸೋಡಾ ಮತ್ತು ಅಂಗಡಿಯಲ್ಲಿ ಸಿಗುವ ತಂಪು ಪಾನೀಯದ ಸೇವನೆ, ಪದೇ ಪದೇ ಟೀ, ಕಾಫಿ ಸೇವನೆಯನ್ನ ಕೂಡ ಮಾಡಬಾರದು.
ಇದರ ಜೊತೆ ಯಾವುದೇ ಕಾರಣಕ್ಕೂ ಹಸಿವಿನಿಂದ ಇರದೇ, ಸಮಯಕ್ಕೆ ಸರಿಯಾಗಿ ಮತ್ತು ಹಸಿವಾದಾಗ ಉತ್ತಮ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯವಾಗಿದೆ. ಇನ್ನು ನಿಮಗೆ ಧೂಮಪಾನ, ಮಧ್ಯಪಾನ ಮಾಡುವ ಅಭ್ಯಾಸವಿದ್ದರೆ, ಗರ್ಭಿಣಿಯಾದಾಗಿನಿಂದ ಹೆರಿಗೆಯಾಗಿ, ಬಾಣಂತನ ಮುಗಿಯುವವರೆಗೂ ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ.
ಇನ್ನು ಗರ್ಭಿಣಿಯಾಗಿದ್ದಾಗ, ವ್ಯಾಯಾಮ ಮಾಡುವುದು ಮುಖ್ಯವಾಗಿದ್ದರೂ ಕೂಡ, ಮೂರು ತಿಂಗಳು ಪ್ರಾಣಾಯಾಮ, ಧ್ಯಾನ ಬಿಟ್ಟು ಬೇರೆ ಯಾವ ವ್ಯಾಯಾಮ ಮಾಡದಿರುವುದೇ ಉತ್ತಮ. ಒಟ್ಟಾರೆಯಾಗಿ, ತಾಜಾ ಸೊಪ್ಪು, ತರಕಾರಿ, ಹಣ್ಣು ಸೇರಿ ವೈದ್ಯರು ಹೇಳಿದ ಆಹಾರ, ಗುಳಿಗೆಯನ್ನ ಸೇವನೆ ಮಾಡುವುದರ ಜೊತೆಗೆ ಮೂರು ತಿಂಗಳು ತುಂಬುವವರೆಗೂ ವಿಶ್ರಾಂತಿ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ.
ಇದರೊಂದಿಗೆ ಯಾವಾಗಲೂ ಖುಷಿ ಖುಷಿಯಾಗಿ, ನಗು ನಗುತ್ತ, ಎಲ್ಲರೊಂದಿಗೂ ಖುಷಿಯಾಗಿ ಮಾತನಾಡುತ್ತ, ಯಾವುದೇ ವಿಷಯಕ್ಕೂ ಟೆನ್ಶನ್ ತೆಗೆದುಕೊಳ್ಳದೇ, ನೆಮ್ಮದಿಯಿಂದ ಇದ್ದರೆ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವೂ ಕೂಡ ಆರೋಗ್ಯವಾಗಿರುತ್ತದೆ.
Discussion about this post