Bengaluru News: ಬೆಂಗಳೂರು : ಇಂದಿನ ಕಾಲದಲ್ಲಿ ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿದೆ. ಟ್ರೆಂಡ್ ಫಾಲೋ ಮಾಡೋಕ್ಕೆ ಹೋಗಿ, ಅದೆಷ್ಟೋ ಜೋಡಿಗಳು ಎಡವಟ್ಟು ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದನ್ನು ನಾವು ನೀವು ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿ, ಪ್ರಿ ವೆಡ್ಡಿಂಗ್ ವೀಡಿಯೋ ಶೂಟ್ ಮಾಡಿ, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಉಚ್ಚರಕನ್ನನಡ ಶಿರಸಿಯ ಉಮ್ಮಚಗಿಯ ವಧು ಭಾರ್ಗವಿ ಮತ್ತು ಶಿವಮೊಗ್ಗದ ಜೋಗ ಸಮೀಪದ ಕಾಳಮಂಜಿಯವರಾದ ವರ ಚಂದನ್ ಕಲಾಹಂಸ ಈ ಪ್ರಿ ವೆಡ್ಡಿಂಗ್ ವೀಡಿಯೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭಾವಿ ಜೋಡಿ ಕಲಾಪ್ರೇಮಿಗಳಾಗಿದ್ದು, ಚಂದನ್ ಕಲಾಹಂಸ ಯಕ್ಷಗಾನ ಕಲಾವಿದರಾಗಿದ್ದಾರೆ. ಜೊತೆಗೆ ಬಿ.ಕಾಂ, ಎಂ. ಎ ಪದವಿಧರರಾಗಿದ್ದು, ಬೆಂಗಳೂರಿನ ವಿಜಯನಗರದಲ್ಲಿ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ವೆಬ್ ಡಿಸೈನ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆ ನಡೆಸುತ್ತಿದ್ದಾರೆ.
ಭಾರ್ಗವಿ ಭರತನಾಟ್ಯದಲ್ಲೇ ವಿದ್ವತ್ ಪೂರೈಸಿದ್ದು, ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಕೂಡ ಮುಗಿಸಿದ್ದಾರೆ. ಹಾಗೆಯೇ ಎಂ.ಕಾಂ. ಕೂಡಾ ಪೂರೈಸಿರುವ ಭಾರ್ಗವಿ ಖಾಸಗಿ ಕಂಪನಿಯೊಂದರಲ್ಲಿ ಸೀನಿಯರ್ ಎಕ್ಸಿಕ್ಯುಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಧು ಭರತನಾಟ್ಯ ಕಲಾವಿದೆಯಾಗಿದ್ದು, ವರ ಯಕ್ಷಗಾನ ಕಲಾವಿದರಾಗಿದ್ದಾರೆ. ಇದೇ ಥೀಮ್‌ನಲ್ಲಿ ಇಬ್ಬರೂ ಫೋಟೋಶೂಟ್ ಮಾಡಿಸಿದ್ದಾರೆ. ಮೊದಲಿಗೆ ಭಾರ್ಗವಿ, ಪಿಳ್ಳಂಗೋವಿಯ ಹಾಡಿಗೆ ಹೆಜ್ಜೆ ಹಾಕಿದರೆ, ಬಳಿಕ ಬರುವ ಚಂದನ್ ಕಲಾಹಂಸ ಯಕ್ಷಗಾನದ ಬಡಗುತಿಟ್ಟಿನ ಪದ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಪರ್ಫಾಮೆನ್ಸ್ ಜೊತೆ ಇವರು ಆಯ್ಕೆ ಮಾಡಿರುವ ಸ್ಥಳವೂ ವೀಡಿಯೋದ ಅಂದವನ್ನು ದುಪ್ಪಟ್ಟು ಮಾಡಿದೆ.
ಒಟ್ಟಿನಲ್ಲಿ ನ.14 ರಂದು ಶಿರಸಿ ಸಮೀಪದ ಕೊಳಗಿಬೀಸ್ ನಲ್ಲಿ ಹಸೆಮಣೆ ಏರಲಿರುವ ನವಜೋಡಿಗೆ ನೆಟ್ಟಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಪ್ರಿ ವೆಡ್ಡಿಂಗ್ ವೀಡಿಯೋವನ್ನು ನೀವಿಲ್ಲಿ ನೋಡಬಹುದು..
Discussion about this post