ಚಿಕ್ಕಮಗಳೂರು: ನಗರಸಭೆ ಚುನಾವಣೆಗೆ ಮತಗಟ್ಟೆಗಳಿಗೆ ಇವಿಎಂ ಮತಯಂತ್ರಗಳ ಹಂಚಿಕೆ(ರ್ಯಾಂಡಮೈಸೇಶನ್) ಕಾರ್ಯ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಉಪಸ್ಥಿತಿಯಲ್ಲಿ ಇವಿಎಂ ಗಳ ಹಂಚಿಕೆ ನಡೆಸಿದರು.
ನಗರಸಭೆ ಚುನಾವಣೆಗೆ ೧೧೦ ಮತಗಟ್ಟೆಗಳಿವೆ. ಈ ಬೂತುಗಳಿಗೆ ಇವಿಎಂಗಳನ್ನು ಸಾಫ್ಟ್ವೇರ್ ಮೂಲಕ ಹಂಚಿಕೆ ಮಾಡಲಾಗಿದೆ. ಇದಲ್ಲದೆ, ೩೫ ಇವಿಎಂಗಳನ್ನು ಹೆಚ್ಚುವರಿಯಾಗಿ ಕಾದಿರಿಸಲಾಗಿದ್ದು, ಚುನಾವಣೆ ದಿನದಂದು ಅಗತ್ಯ ಬಿದ್ದಲ್ಲಿ ಬಳಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇವಿಎಂ ಯಂತ್ರಗಳ ಸಮರ್ಪಕ ಕಾರ್ಯನಿರ್ವಹಣೆಗೆ ಬಿಇಎಲ್ ಇಂಜಿನಿಯರ್ಗಳು ಆಗಮಿಸಿದ್ದಾರೆ ಎಂದರು.
ಬಳಿಕ ಇವಿಎಂಗಳ ಹಂಚಿಕೆಯ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ, ಚುನಾವಣಾ ವೀಕ್ಷಕ ಕಿಶೋರ್ ಕುಮಾರ್, ವಿವಿಧ ವಾರ್ಡುಗಳ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.
Allocation of EVMs for municipal elections complete
Discussion about this post