ಬೆಂಗಳೂರು: ಆರ್ ಅಶ್ವಿನ್ ಭಾರತೀಯ ಕ್ರಿಕೆಟ್‌ಗೆ ಅತ್ಯದ್ಭುತ ಸೇವೆ ಸಲ್ಲಿಸುತ್ತಿರುವ ಹಾಗೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಸರಾಂತ ಆಲ್‌ರೌಂಡ್ ಕ್ರಿಕೆಟ್ ಆಟಗಾರ. ಸ್ಪಿನ್ ಮಾಂತ್ರಿಕರಾದ ಅನಿಲ್ ಕುಂಬ್ಳೆ ಹಾಗೂ ಹರಭಜನ್ ಸಿಂಗ್ ತೆರೆಮರೆಗೆ ಸರಿದ ನಂತರ ತಂಡದ ಸ್ಪಿನ್ ವಿಭಾಗದ ಚುಕ್ಕಾಣಿ ಹಿಡಿದು ಹಿಂದಿನ ತಲೆಮಾರಿನ ಆಟಗಾರರ ಸಾಧನೆಯನ್ನು ಮುಂದುವರೆಸುತ್ತಿರುವ ಭರವಸೆಯ ಆಟಗಾರ. ಸ್ಪಿನ್ ಬೌಲಿಂಗನಲ್ಲಿ ಮಾತ್ರವಲ್ಲದೇ ಉತ್ತಮ ಬ್ಯಾಟ್ಸ್‌ಮನ್ ಆಗಿಯೂ ಸಹ ಅನೇಕ ಸಂಕಷ್ಟದ ಸಂದರ್ಭಗಳಲ್ಲಿ ತಂಡಕ್ಕೆ ಆಪದ್ಬಾಂಧವನಾಗಿ ನೆರವಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಸಾಧನೆಯನ್ನೂ ಮಾಡಿದ್ದಾರೆ ಅಶ್ವಿನ್. ಇಲ್ಲಿಯವರೆಗೆ ಟೆಸ್ಟ್ ಪಂದ್ಯಗಳಲ್ಲಿ 427 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್ ಅನಿಲ್ ಕುಂಬ್ಳೆ ಹಾಗೂ ಕಪಿಲ್ ದೇವ್‌ರ ನಂತರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಭಾರತದ ಬೌಲರ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ ಅಶ್ವಿನ್.
ಕ್ರಿಕೆಟ್ ಆಟವನ್ನು ಕೇವಲ ಶಾರೀರಿಕವಾಗಿ ಆಡದೇ ಅದನ್ನು ಬುದ್ಧಿಶಕ್ತಿಯಿಂದಲೂ ಆಡಬೇಕಾಗುತ್ತದೆ ಎಂಬುದನ್ನು ತೋರಿಸಿಕೊಟ್ಟ ಕೆಲವೇ ಬುದ್ಧಿವಂತ ಆಟಗಾರರಲ್ಲಿ ಅಶ್ವಿನ್ ಕೂಡ ಒಬ್ಬರು. ಇಂತಹ ಆಲ್‌ರೌಂಡ್ ಸಾಧಕ ಕೆಲವೇ ವರ್ಷಗಳ ಹಿಂದೆ ನಿವೃತ್ತಿಯ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದರೆಂದರೆ ನೀವು ನಂಬುತ್ತೀರಾ? ಈ ವಿಷಯ ಅವರಿಂದಲೇ ಬಹಿರಂಗವಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ಪತ್ರಕರ್ತರೊಂದಿಗೆ ಮುಖಾಮುಖಿಯಾಗಿದ್ದ 35ರ ಹರೆಯದ ಅಶ್ವಿನ್ ಇದಕ್ಕೆ ನೀಡಿದ ಕಾರಣವೆಂದರೆ ದೀರ್ಘಕಾಲದಿಂದ ಗಾಯಗಳಿಂದ್ ಬಳಲಿದ್ದು ಹಾಗೂ ಕೆಲವೊಮ್ಮೆ ನಿರೀಕ್ಷಿತ ಸಾಧನೆ ಬರದಿದ್ದಾಗ ಎದುರಾದ ಬೆಂಬಲದ ಕೊರತೆ.
ಅವರೇ ಹೇಳುವಂತೆ, “2018 ಮತ್ತು 2020ರ ಮಧ್ಯದ ಅವಧಿಯಲ್ಲಿ ನಾನು ಕ್ರಿಕಟ್ ಆಡುವುದನ್ನು ನಿಲ್ಲಿಸಿಬಿಡಬೇಕೆಂದುಕೊಂಡಿದ್ದೆ. ಇದಕ್ಕೆ ಅನೇಕ ಕಾರಣಗಳಿದ್ದವು. ಎಷ್ಟೇ ಕಠಿಣ ಪರಿಶ್ರಮ ಹಾಕಿದರೂ ಯಶಸ್ಸು ಮರೀಚಿಕೆಯಾಗಿತ್ತು. ನಾನು ಹೆಚ್ಚು-ಹೆಚ್ಚು ಶ್ರಮ ಪಟ್ಟಷ್ಟೂ ಯಶಸ್ಸು ನನ್ನಿಂದ ಅಷ್ಟೇ ದೂರ ಹೋಗುತ್ತಿತ್ತು. ಸ್ನಾಯುಗಳ ಉರಿಯೂತದ ಸಮಸ್ಯೆಯು ಯಾವ ಮಟ್ಟಕ್ಕೆ ಉಲ್ಬಣಗೊಂಡಿತೆಂದರೆ ಆರು ಚೆಂಡುಗಳ ಒಂದು ಓವರ್ ಬೌಲ್ ಮಾಡಿದ ನಂತರ ಉಸಿರು ತೆಗೆದುಕೊಳ್ಳಲು ಪರಿತಪಿಸುವಂತಾಗುತ್ತಿತ್ತು ಹಾಗೂ ಇಡೀ ದೇಹದ ತುಂಬಾ ನೋವು ಆವರಿಸುತ್ತಿತ್ತು. ಇದರಿಂದಾಗಿ ಆಟದಲ್ಲಿ ಮುಂದುವರೆಯಲು ನಾನು ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಿ ಬಂದಿತ್ತು. ಅತಿಯಾದ ನೋವು ನನ್ನ ಬೌಲಿಂಗ್ ಸಾಧನೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ಬೌಲಿಂಗ್ ಮಾಡುವಾಗ ಹೆಚ್ಚು ಜಿಗಿದು ಬೌಲ್ ಮಾಡಲಾಗುತ್ತಿರಲಿಲ್ಲ. ಆದರೆ ಪರಿಣಾಮಕಾರಿಯಾಗಿ ಚೆಂಡೆಸೆಯಲು ಬೆನ್ನು ಹಾಗೂ ಭುಜಗಳನ್ನು ಹೆಚ್ಚು ಉಪಯೋಗಿಸಬೇಕಾಗುತ್ತಿತ್ತು ಹಾಗೂ ಇದರಿಂದಾಗಿ ಸಮಸ್ಯೆ ಇನ್ನೂ ಉಲ್ಬಣಿಸುತ್ತಿತ್ತು. ಅದೇ ಸಮಯದಲ್ಲಿ ಜನರಿಂದ ನನಗೆ ದೊರೆಯುತ್ತಿದ್ದ ಬೆಂಬಲ ಕಡಿಮೆಯಾಗುತ್ತಿತ್ತು. ಒಮ್ಮೊಮ್ಮೆ ಜನರು ನನ್ನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಹಾಗೂ ಮೊದಲಿನಂತೆ ಬೆಂಬಲ ನೀಡುತ್ತಿಲ್ಲ ಎಂದುಕೊಳ್ಳುತ್ತಿದ್ದೆ. ಇಂತಹ ಸಮಯಗಳಲ್ಲಿ ಬಹಳಷ್ಟು ಜನರಿಗೆ ಸಿಕ್ಕಿರುವ ಬೆಂಬಲ ನನಗೇಕೆ ಸಿಗುತ್ತಿಲ್ಲ? ತಂಡಕ್ಕಾಗಿ ನಾನು ಹಲವಾರು ಜಯಗಳನ್ನು ತಂದಿಲ್ಲವೇ? ನನ್ನ ಸಾಧನೆಯಲ್ಲಿ ಕೊರತೆಯಿದೆಯೇ ಎನ್ನುವ ಅನೇಕ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಕ್ರಿಕೆಟ್ ಬಿಟ್ಟು ಬೇರೆ ಏನನ್ನಾದರೂ ಮಾಡುವ ಬಗ್ಗೆಯೂ ಯೋಚಿಸುತ್ತಿದ್ದೆ.”
ಕ್ರಿಕೆಟ್ ಆಡುವುದನ್ನು ಬಿಟ್ಟುಬಿಡುವ ಆಲೋಚನೆ ಅನೇಕ ಬಾರಿ ಬರುತ್ತಿತ್ತು ಎಂದ ಅವರು 2018ರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲೂ ಇದೇ ಪರಿಸ್ಥಿತಿ ಇತ್ತು ಎಂದರು. ನಂತರದ ಆಸ್ಟ್ರೇಲಿಯಾ ಪ್ರವಾಸದಲ್ಲೂ ತೀವ್ರವಾಗಿ ಗಾಯಗೊಂಡಾಗ ಹೀಗೆಯೇ ಯೋಚಿಸುತ್ತಿದ್ದೆ ಎಂದರು ಅಶ್ವಿನ್. ಈ ವಿಷಯವನ್ನು ನಾನು ನನ್ನ ಪತ್ನಿಯನ್ನು ಬಿಟ್ಟು ಬೇರೆ ಯಾರೊಂದಿಗೂ ಚರ್ಚಿಸುತ್ತಿರಲಿಲ್ಲ ಎಂದ ಅಶ್ವಿನ್, ನನ್ನ ತಂದೆ ಮಾತ್ರ ನಾನು ಮತ್ತೊಮ್ಮೆ ಚುಟುಕು ಕ್ರಿಕೆಟ್ ಆಡಿಯೇ ತೀರುತ್ತೇನೆಂದು ಹಾಗೂ ತಾವು ಮರಣಿಸುವ ಮೊದಲು ಅದನ್ನು ನೋಡುವುದಾಗಿ ಅವರು ದೃಢವಾಗಿ ನಂಬಿದ್ದರು ಎಂದು ನೆನಪಿಸಿಕೊಂಡರು.
ಎಂತಹ ಕಠಿಣ ಪರಿಸ್ಥಿತಿಗಳೇ ಎದುರಾದರೂ ಧೈರ್ಯಗೆಡದೇ ಪ್ರಯತ್ನಶೀಲರಾದರೆ ಸಾಧನೆ ಅಸಾಧ್ಯವಲ್ಲ ಎನ್ನುವುದನ್ನು ಇಂತಹ ಸಾಧಕರನ್ನು ನೋಡಿಯೇ ತಿಳಿಯಬೇಕು.
Ashwin says he was planning to leave cricket during 2018-20 due injuries and lack of support from people
ಇದನ್ನೂ ಓದಿ: Cricket: ಟೆಸ್ಟ್ ತಂಡದ ಉಪನಾಯಕನ ಪಟ್ಟಕ್ಕೆ ರಾಹುಲ್ ಆಯ್ಕೆ ಅತ್ಯಂತ ಸೂಕ್ತ ಹಾಗೂ ಸಮಯೋಚಿತ: ಸಬಾ ಕರೀಮ್
ಇದನ್ನೂ ಓದಿ: IND vs SA Test Cricket: ಮುಂದಿನ ಮೂರು ದಿನಗಳ ಅಭ್ಯಾಸ ನಿರ್ಣಾಯಕವೆಂದ ರಾಹುಲ್ ದ್ರಾವಿಡ್
Discussion about this post