ಚಿಕ್ಕಮಗಳೂರು: ಬಿಪಿಎಲ್ ಪಡಿತರ ಚೀಟಿಗಾಗಿ ಹೊಸದಾಗಿ ಸಲ್ಲಿಸಿರುವ ಅರ್ಜಿಗಳು ಕಳೆದ ಒಂದೂವರೆ ವರ್ಷದಿಂದ ವಿಲೇವಾರಿಯಾಗಿಲ್ಲ. ಜಿಲ್ಲೆಯಲ್ಲಿ ಬರೋಬರಿ ೧೩,೨೦೯ ಅರ್ಜಿಗಳು ಸಲ್ಲಿಕೆಯಾಗಿದ್ದು, ರೇಷನ್ ಕಾರ್ಡ್ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
೨೦೧೯- ೨೦ರಲ್ಲಿ ೮೦೦೯, ಪ್ರಸಕ್ತ ಸಾಲಿನ (೨೦೨೦-೨೧)ನಲ್ಲಿ ೫೨೦೦ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈವರೆಗೆ ಪಡಿತರ ಚೀಟಿ ವಿತರಣೆಯಾಗಿಲ್ಲ. ಹಲವು ಸರ್ಕಾರಿ ಸವಲತ್ತಿಗೆ ಪಡಿತರ ಚೀಟಿಯ ಅವಶ್ಯಕತೆ ಇರುವುದರಿಂದ ರೇಷನ್ ಕಾರ್ಡ್ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ ಎಂದು ಅರ್ಜಿದಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಬಿಪಿಎಲ್ ಪಡಿತರ ಚೀಟಿ ಕಡ್ಡಾಯಗೊಳಿಸಲಾಗಿದೆ. ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೆ ತುರ್ತು ಆರೋಗ್ಯ ಚಿಕಿತ್ಸೆ ಹಿನ್ನಲೆಯಲ್ಲಿ ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಹೊಸ ಪಡಿತರ ಚೀಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಂದರೆ, ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ಚಿಕಿತ್ಸೆ ಪಡೆಯುತ್ತಿರುವ ವೈದ್ಯರಿಂದ ಹೆಚ್ಚಿನ ಚಿಕಿತ್ಸೆಯ ವರದಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಬೇಕು.
ಇದನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಿಂದ ಇಲಾಖೆಯ ಆಯುಕ್ತರಿಗೆ ವರದಿಯನ್ನು ಸಲ್ಲಿಸಿ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತಿದೆ. ಇನ್ನುಳಿದ ಅರ್ಜಿಗಳು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಕೋವಿಡ್ ಅಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಬಿಪಿಎಲ್ ಪಡಿತರ ಚೀಟಿ ವಿತರಣಾ ಕಾರ್ಯ ಸ್ಥಗಿತಗೊಂಡಿತು. ಸಾರ್ವಜನಿಕರು ಬಿಪಿಎಲ್ ರೇಷನ್ ಕಾರ್ಡ್ಗಾಗಿ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.
ಅರ್ಜಿಗಳು ಬರುತ್ತಿದ್ದಂತೆ ಆಹಾರ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಪ್ರಧಾನ ಕಚೇರಿಗೆ ವರದಿ ಸಲ್ಲಿಸುತ್ತಿದ್ದಾರೆ. ಕಳೆದ ಒಂದೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ ೯೮೦ ಅರ್ಜಿಗಳು ಪರಿಶೀಲನೆ ನಡೆಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ೨,೪೦,೨೨೪ ಬಿಪಿಎಲ್, ೨೨,೪೬೫ ಅಂತ್ಯೋದಯ, ೬೦,೬೨೮ ಎಪಿಎಲ್ ಪಡಿತರ ಚೀಟಿಗಳು ಇವೆ. ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಪಡೆಯಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಈ ಗೈಡ್ ಲೈನ್ ಉಲ್ಲಂಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ, ಅದನ್ನು ರದ್ದುಪಡಿಸಲು ಅವಕಾಶ ಇದೆ. ಹಲವು ಮಂದಿ ಅನರ್ಹರು ತಮ್ಮಲ್ಲಿರುವ ಬಿಪಿಎಲ್ಕಾರ್ಡ್ ಇಲಾಖೆಗೆ ಸ್ವ ಇಚ್ಚೆಯಿಂದ ಹಸ್ತಾಂತರ ಮಾಡಿದ್ದಾರೆ. ಕೆಲವು ಮಂದಿ ಹಾಗೆಯೇ ಮುಂದುವರೆದಿದ್ದಾರೆ. ಕೆಲವು ಸರ್ಕಾರಿ ನೌಕರರು ಸಹ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರು, ಇವುಗಳನ್ನು ಪತ್ತೆಹಚ್ಚಿ ೫೪ ಮಂದಿ ಸರ್ಕಾರಿ ನೌಕರರು ಸೇರಿದಂತೆ ಈವರೆಗೆ ೧೪೦೮ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗಿದೆ.
ಅವರು ಪಡೆದ ರಿಯಾಯ್ತಿಯ ಪಡಿತರಕ್ಕೆ ದರ ನಿಗದಿಪಡಿಸಿ ಸುಮಾರು ೩,೫೯,೯೩೪ ರುಪಾಯಿ ವಸೂಲಿ ಮಾಡಲಾಗಿದೆ. ಅನರ್ಹ ಪಡಿತರ ಚೀಟಿಯನ್ನು ರದ್ದು ಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೆ, ಹೊಸದಾಗಿ ಬಿಪಿಎಲ್ ಕಾರ್ಡ್ ಕೊಡುವ ಕಾರ್ಯಕ್ಕೆ ಗ್ರಹಣ ಹಿಡಿದಿದೆ.
————————–
ಜಿಲ್ಲೆಯಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ಗಾಗಿ ೧೩,೨೦೯ ಅರ್ಜಿಗಳು ಸಲ್ಲಿಕೆಯಾಗಿವೆ. ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಸದ್ಯದಲ್ಲೇ ಪಡಿತರ ಚೀಟಿ ವಿತರಣಾ ಕಾರ್ಯ ಪುನಾರಂಭಗೊಳ್ಳಲಿದೆ.
ಕೃಷ್ಣಮೂರ್ತಿ, ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ.
————————–
ಇದನ್ನೂ ಓದಿ: Soon children are vaccinated too: 1 ಕೋಟಿ ಡೋಸ್ ಝೈಕೋವ್-ಡಿ ಲಸಿಕೆ ಖರೀದಿಸಲು ಕೇಂದ್ರ ಸರ್ಕಾರ ಆದೇಶ
ಇದನ್ನೂ ಓದಿ: Warrior dies in Jammu: ಕಡೂರು ತಾಲೂಕಿನ ಯೋಧ ಜಮ್ಮುವಿನಲ್ಲಿ ನಿಧನ

























Discussion about this post