ಚಿಕ್ಕಮಗಳೂರು : ಸತತವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಆವತಿ ಹೋಬಳಿಯಾದ್ಯಾಂತ ಕಾಫಿ, ಮೆಣಸು ಬೆಳೆಗಳು ಹಾನಿಯಾಗಿದ್ದು ಸಂಬಂಧಿಸಿದ ಇಲಾಖೆಯಿಂದ ಸಮೀಕ್ಷೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಎನ್.ಶ್ರೀಧರ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ೨೦೨೧ ರಲ್ಲಿ ಸುರಿದ ಅಕಾಲಿಕ ಮಳೆಗೆ ಹೂವಾಗಿದ್ದ ಕಾಫಿ ಶೇ ೫೦ ರಷ್ಟು ಹಣ್ಣಾಗಿ ಕಟಾವಿಗೆ ಬಂದಿದೆ. ಆದರೆ ಕಳೆದ ವಾರಗಳ ಹಿಂದೆ ಸತತವಾಗಿ ಸುರಿದ ಮಳೆಗೆ ಕಾಫಿ ಬೆಳೆಯನ್ನು ಕಟಾವು ಮಾಡಲಾಗದೆ ಸಂಪೂರ್ಣವಾಗಿ ಹಾನಿಯಾಗಿ ನೆಲಕಚ್ಚಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಆವತಿ ಹೋಬಳಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮೆಣಸು ಇಳುವರಿ ನೆಲಕಚ್ಚಿದೆ. ಇದು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಕಾಫಿ ಬೆಳೆಗಾರರ ಸಂಘವು ಈಗಾಗಲೇ ಕೇಂದ್ರ ಹಣಕಾಸು ಸಚಿವರು, ಕೃಷಿ ಸಚಿವರೊಂದಿಗೆ ಬೆಳೆಹಾನಿಯ ಬಗ್ಗೆ ಮಾಹಿತಿ ನೀಡಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ, ಕೇವಲ ಭರವಸೆ ಮಾತುಗಳನ್ನಷ್ಟೇ ಹೇಳುತ್ತಾರೆ, ಜನಪ್ರತಿನಿಧಿಗಳು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅತಿವೃಷ್ಟಿ ಹಾನಿ ಬೆಳೆಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಬೆಳೆಹಾನಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು, ಬೆಳೆಹಾನಿ ಜತೆಗೆ ನಿರೀಕ್ಷಿತ ಫಸಲು ಬಾರದೆ ಬೆಳೆಗಾರ ಕಂಗಲಾಗಿದ್ದು ಇದೀಗ ಬ್ಯಾಂಕುಗಳು ಸರ್ಫೆಸಿ ಕಾಯ್ದೆ ಅನುಸಾರ ನೋಟಿಸ್ ನೀಡುವ ಮೂಲಕ ಸಾಲವಸೂಲಾತಿಗೆ ಮುಂದಾಗಿವೆ. ಇದೂ ಬೆಳೆಗಾರರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ ಎಂದರು.
ಕೂಲಿ ಕಾರ್ಮಿಕರ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ರಸಗೊಬ್ಬರದ ಬೆಲೆ ಏರಿಕೆಯು ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ, ಚಿಕ್ಕಮಗಳೂರು ತಾಲ್ಲೂಕನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಸರ್ಕಾರದಿಂದ ಬೆಳೆಗಾರರಿಗೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ, ಜಿಲ್ಲಾಡಳಿತ ತುರ್ತಾಗಿ ಸಮೀಕ್ಷೆ ನಡೆಸಿ ಕಾಫಿ, ಮೆಣಸು ಬೆಳೆಗಾರರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಉಪಾಧ್ಯಕ್ಷ ವಸಂತೇಗೌಡ ಮಾತನಾಡಿ ಕಾಫಿ ಮಂಡಳಿಯಿಂದ ಹಿಂದೆ ಯಂತ್ರೋಪಕರಣ ಖರೀದಿ, ಕಾಫಿ ತೋಟ ಮರು ನಿರ್ಮಾಣಕ್ಕೆ ಸಬ್ಸಿಡಿ ಮತ್ತಿತರ ಸೌಲಭ್ಯವನ್ನು ನೀಡುತ್ತಿತ್ತು, ಆದರೆ ಇದೀಗ ಅದೆಲ್ಲವನ್ನು ನಿಲ್ಲಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರು, ಬೆಳೆಗಾರರಿಗೆ ಕೇವಲ ಭರವಸೆ ನೀಡುತ್ತಿವೆ ವಿನಃ ಪರಿಹಾರದ ನೆರವು ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಆವತಿ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ಕಾಫಿ, ಮೆಣಸು ಹಾನಿಯಾಗಿದ್ದರೂ ಯಾವುದೇ ಅಧಿಕಾರಿಗಳು ಸಮೀಕ್ಷೆ ಕೈಗೊಂಡಿಲ್ಲ , ಪರಿಹಾರವನ್ನು ನೀಡಿಲ್ಲ ಎಂದು ದೂಷಿಸಿದರು.
ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಮಾತನಾಡಿ ಬೆಳೆಹಾನಿ ಸಂಭವಿಸಿದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್ ನಿಯಮದಂತೆ ನೀಡುವ ಹಾನಿ ಮೊತ್ತವನ್ನು ಪ್ರತಿ ಹೆಕ್ಟೇರ್‌ಗೆ ೫೦ ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ನ.೧೨ ರಂದು ಅವತಿಯ ಅಂಬೇಡ್ಕರ್ ಭವನದಲ್ಲಿ ಚಲನಚಿತ್ರ ನಟ ಪುನೀತ್ ನಿಧನ ಹಿನ್ನಲೆ ಭಾವ ಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ ಜತೆಗೆ ನೇತ್ರದಾನ ಶಿಬಿರ ಆಯೋಜಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆವತಿ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ನಾರಾಯಣಗೌಡ, ನಿರ್ದೇಶಕರಾದ ಮಲ್ಲೇಶಗೌಡ, ಎ.ಟಿ. ವಸಂತ್‌ಕುಮಾರ್, ಪ್ರಸನ್ನ, ಪ್ರಭಾಕರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಫಿ ಬೆಳೆಗಾರರ ಸಾಲ ಮರುಹೊಂದಾಣಿಕೆ ಕ್ರಮ ಕೈಗೊಳ್ಳಲು ಸಭೆ

























Discussion about this post